ಪಕ್ಷಿಕೆರೆ: ಚಿನ್ನಾಭರಣಗಳಿಗೆ ತಡಕಾಡಿ 25 ಸಾವಿರ ರೂ. ಮೌಲ್ಯದ ವಾಚ್ ಕದ್ದೊಯ್ದ ಕಳ್ಳರು

Update: 2016-09-02 06:46 GMT

ಮುಲ್ಕಿ, ಸೆ.2: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವುಗೈಯಲು ಯತ್ನಿಸಿದ್ದು, ಚಿನ್ನಾಭರಣಗಳು ಸಿಗದಾದಾಗ 25 ಸಾವಿರ ರೂ. ಮೌಲ್ಯದ ವಾಚ್ ಒಂದನ್ನು ಕದ್ದೊಯ್ದ ಘಟನೆ ಪಕ್ಷಿಕೆರೆಯ ಹೊಸಕಾಡು ಎಂಬಲ್ಲಿ ಸಂಭವಿಸಿದೆ.

ಪಕ್ಷಿಕೆರೆಯ ಹೊಸಕಾಡು ನಿವಾಸಿ ಅಬ್ದುರ್ರಝಾಕ್ ಎಂಬವರ ಮನೆಯಲ್ಲಿ ಕಳ್ಳತನ ಸಂಭವಿಸಿದೆ. ರಝಾಕ್ ಮತ್ತವರ ಪತ್ನಿ 18 ದಿನಗಳ ಹಿಂದೆಡ ಉಮ್ರಾಕ್ಕೆ ತೆರಳಿದ್ದರು. ಮನೆಯಲ್ಲಿದ್ದ ಸೊಸೆ ತನ್ನ ತಾಯಿ ಮನೆಗೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕೃತ್ಯ ಎಸಗಿದ್ದಾರೆ.

ರಾಡ್ ಮೂಲಕ ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಒಳಹೊಕ್ಕ ಕಳ್ಳರು ಮನೆಯ ಒಳಗಿದ್ದ ಮೂರು ಕಪಾಟುಗಳನ್ನು ಒಡೆದಿದ್ದಾರೆ. ಚಿನ್ನಾಭರಣ ಹಾಗೂ ನಗದಿಗಾಗಿ ಮೂರು ಕಪಾಟುಗಳನ್ನು ತಡಕಾಡಿದ್ದು, ಏನೂ ಸಿಗದಾದಾಗ 25 ಸಾವಿರ ರೂ. ಮೌಲ್ಯದ ವಾಚ್‌ನ್ನು ಕಳವುಗೈದಿದ್ದಾರೆ ಎನ್ನಲಾಗಿದೆ.

ಕಳವು ವಿಚಾರ ತಿಳಿದು ಸ್ಥಳೀಯರು ಮನೆಗೆ ಭೇಟಿ ನೀಡಿದ್ದು, ಪೊಲೀಸರ ಆಗಮನದ ಮೊದಲೇ ಮನೆಯೊಳಗೆ ಸ್ಥಳೀಯರು ಹೋಗಿದ್ದ ಕಾರಣ ಕಳ್ಳರ ಜಾಡು ಹಿಡಿಯುವುದು ಕಷ್ಟ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮನೆಯ ವಿವರಗಳನ್ನು ತಿಳಿದಿರುವ ಸ್ಥಳೀಯರೇ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News