×
Ad

ಜನರ ರಕ್ಷಣೆಗಾಗಿ ಈ ಐಎಎಸ್ ಅಧಿಕಾರಿ ಏನು ಮಾಡಿದರು ನೋಡಿ !

Update: 2016-09-02 12:41 IST

ಪಾಟ್ನಾ, ಸೆ.2: ಇತ್ತೀಚೆಗೆ ಬಿಹಾರದ ಸಾವಿರಾರು ಹಳ್ಳಿಗಳ ಲಕ್ಷಗಟ್ಟಲೆ ಜನರು ಪ್ರವಾಹ ಪರಿಸ್ಥಿತಿಯಿಂದ ಕಂಗಾಲಾಗಿದ್ದ ಸಮಯದಲ್ಲಿ ಬಲಿಯ ಜಿಲ್ಲೆಯ ಬೈರಿಯಾ ಎಂಬ ಹಳ್ಳಿಗೂ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿತ್ತು. ಈ ಗ್ರಾಮ ಹಾಗೂ ಸುತ್ತಮುತ್ತಲಿನ ಒಂದು ಡಜನ್ ಗ್ರಾಮಗಳನ್ನು ಪ್ರವಾಹದಿಂದ ರಕ್ಷಿಸುವ 60 ವರ್ಷ ಹಳೆಯದಾದ ಅಣೆಕಟ್ಟೊಂದು ದುಬೆಚಪಾರ ಜಿಲ್ಲೆಯಲ್ಲಿತ್ತಾದರೂ ಈ ಅಣೆಕಟ್ಟೂ ದುರಸ್ತಿಯಲ್ಲಿತ್ತು. ಆದರೆ ನೀರಿನ ಒತ್ತಡದಿಂದ ದುರಸ್ತಿಯ ನಡುವೆಯೂ ಈ ಅಣೆಕಟ್ಟು ಕುಸಿಯಬಹುದೆಂಬ ಮುನ್ಸೂಚನೆ ದೊರೆತ ಕೂಡಲೇ ಅಪಾಯದ ಎಚ್ಚರಿಕೆ ನೀಡಲಾಗಿತ್ತು. ಇಂತಹ ಒಂದು ಸಂಕಷ್ಟದ ಸಮಯದಲ್ಲಿಯೇ ಬಲಿಯಾ ಜಿಲ್ಲೆಯ ಹಿರಿಯ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಗಿದ್ದ ಅರವಿಂದ್ ಕುಮಾರ್ ಎಂಬ ಯುವ ಐಎಎಸ್ ಅಧಿಕಾರಿಯ ಕರ್ತವ್ಯನಿಷ್ಠೆ ಹೊರಜಗತ್ತಿಗೆ ತಿಳಿದು ಬಂದಿತ್ತು.

ಅಣೆಕಟ್ಟು ಅಪಾಯದಲ್ಲಿದೆಯೆಂಬ ಮಾಹಿತಿ ಅರವಿಂದ್ ಕುಮಾರ್ ಅವರಿಗೆ ಆಗಸ್ಟ್ 26 ರ ರಾತ್ರಿ ದೊರೆಯುತ್ತಲೇ ಅವರು ಕಾರನ್ನೇರಿ ಮುಂಜಾವು ಸುಮಾರು 2 ಗಂಟೆಯ ಹೊತ್ತಿಗೆ ಬೈರಿಯಾ ತಲುಪಿದ್ದರು. ಬೋಟೊಂದರ ಸಹಾಯದಿಂದ ಅವರು ಅಣೆಕಟ್ಟು ದುರಸ್ತಿ ನಡೆಯುತ್ತಿದ್ದ ಸ್ಥಳಕ್ಕೆ ಬಂದಾಗ ಅಲ್ಲಿ ಭಯಭೀತ ಜನರನ್ನು ನೋಡಿ ಅವರಿಗೆ ಧೈರ್ಯ ತುಂಬಿದರಲ್ಲದೆ, ಗ್ರಾಮಸ್ಥರಿಗೆ ತಮ್ಮ ಮನೆಗಳನ್ನು ತೊರೆದು ರಾಷ್ಟ್ರೀಯ ಹೆದ್ದಾರಿ ಸಮೀಪದ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದರು. ತಮ್ಮ ಸಿಬ್ಬಂದಿಯ ಮೂಲಕ ಅಲ್ಲಿನ ನಾವಿಕರನ್ನು ಎಚ್ಚರಿಸಿ ಜನರ ರಕ್ಷಣೆಗೆ ಧಾವಿಸುವಂತೆ ಹೇಳಿದರು. ಅವರಿಗೆ ತಮ್ಮ ಕಿಸೆಯಿಂದಲೇ ಡೀಸೆಲ್ ಮತ್ತಿತರ ಅಗತ್ಯ ವಸ್ತುಗಳನ್ನು ಖರೀದಿಸಲು ಹಣ ನೀಡಿದರು.

ಅಲ್ಲಿನ ನಿರ್ಮಾಣ ಸ್ಥಳದಲ್ಲಿ ಹಲವಾರು ಜಿಯೋ ಬ್ಯಾಗುಗಳಿರುವುದನ್ನು ಗಮನಿಸಿದ ಅವರು ಈ ಚೀಲಗಳನ್ನು ಅಣೆಕಟ್ಟಿಗೆ ಅಡ್ಡಲಾಗಿ ಇರಿಸಿ ಗ್ರಾಮದೆಡೆಗೆ ಅಣೆಕಟ್ಟಿನ ನೀರು ಹರಿದು ಬರದಂತೆ ಮಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಲು ನಿರ್ಧರಿಸಿದರು. ಆದರೆ ಅಲ್ಲಿರುವ ಯಾರೂ ಈ ಚೀಲಗಳನ್ನು ಎತ್ತಿ ಅಣೆಕಟ್ಟಿನ ಬದಿಯಲ್ಲಿ ಇಡಲು ಧೈರ್ಯ ತೋರದ್ದರಿಂದ ಸ್ವತಹ ಅರವಿಂದ್ ಕುಮಾರ್ ಅವರೇ ಚೀಲಗಳನ್ನು ತಲೆಯಲ್ಲಿ ಹೊತ್ತು ಸಾಗಿದರು. ಅವರನ್ನು ನೋಡುತ್ತಲೇ ಹಲವಾರು ಮಂದಿ ಸಹಾಯ ಮಾಡಲು ಮುಂದೆ ಬಂದು ಸುಮಾರು 100-150 ಮಂದಿ ಮಾನವ ಸರಪಳಿ ನಿರ್ಮಿಸಿ ಚೀಲಗಳನ್ನು ಇರಿಸಿದರು. ಹೀಗೆ ಸುಮಾರು ಒಂದು ಗಂಟೆಯೊಳಗೆ 3.5 ಕಿಮಿ ಉದ್ದದ ಅಣೆಕಟ್ಟಿನ ಸುತ್ತಲೂ ಈ ಗೋಣಿಗಳನ್ನಿರಿಸಲಾಯಿತು.

ಪರಿಸ್ಥಿತಿ ನಿಯಂತ್ರಣಕ್ಕೆ ಬಂತೆಂದು ಅರಿತ ಕೂಡಲೇ ಅರವಿಂದ್ ಕುಮಾರ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಸುದ್ದಿ ಮುಟ್ಟಿಸಿದರು, ಕೂಡಲೇ ಆಗಮಿಸಿದ ತಂಡ ಅಪಾಯದಲ್ಲಿರುವ ಗ್ರಾಮಸ್ಥರನ್ನು ಸ್ಥಳಾಂತರಿಸಿದರು. ಹೀಗೆ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಅಣೆಕಟ್ಟು ಕುಸಿದಿತ್ತು. ಆದರೆ ಗ್ರಾಮಸ್ಥರನ್ನೆಲ್ಲಾ ಸುರಕ್ಷಿತ ಸ್ಥಳಕ್ಕೆಸ್ಥಳಾಂತರಿಸಲಾಗಿದ್ದರಿಂದ ಹೆಚ್ಚಿನ ಸಮಸ್ಯೆಯಾಗಿರಲಿಲ್ಲ.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಅಭಿಮಾನಿಯಾಗಿರುವ ಅರವಿಂದ್ ಕುಮಾರ್ ವಾರಣಾಸಿಯ ಬಡ ಕುಟುಂಬವೊಂದರಿಂದ ಬಂದವರು. ಅವರ ಕಾಲೇಜು ಶಿಕ್ಷಣಕ್ಕೆ ಅವರ ಸ್ನೇಹಿತರೇ ಹಣ ಒಟ್ಟುಗೂಡಿಸಿ ಸಹಾಯ ಮಾಡಿದ್ದರು. ಕಳೆದ ಜುಲೈ ತಿಂಗಳಲ್ಲಿ ಅವರು ಬಲಿಯಾ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಢಾಗೆ ಅವರಿಗೆ 28 ವರ್ಷ ವಯಸ್ಸಾಗಿತ್ತು.

ಈ ಅಪರೂಪದ ಅಧಿಕಾರಿಯ ಜನಸೇವೆಯ ವೈಖರಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವುದಂತೂ ಖಂಡಿತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News