ಹಜ್ ಗೆ ಭಾರತ ಸರಕಾರದ ಪ್ರತಿನಿಧಿಗಳಾಗಿ ಇಬ್ಬರು ಗುಜರಾತಿಗಳು

Update: 2016-09-02 07:41 GMT

ಅಹ್ಮದಾಬಾದ್, ಸೆ.2: ಹಜ್ ಗುಡ್ ವಿಲ್ ಮಿಷನ್ ಅನ್ವಯ ಪ್ರಪ್ರಥಮ ಬಾರಿಗೆ ಇಬ್ಬರು ಗುಜರಾತಿಗಳು ಸೌದಿ ಅರೇಬಿಯಾದಲ್ಲಿ ಈ ಬಾರಿ ಭಾರತ ಸರಕಾರವನ್ನು ಪ್ರತಿನಿಧಿಸಲಿದ್ದಾರೆ. ಈ ದ್ವಿಸದಸ್ಯ ನಿಯೋಗದ ನೇತೃತ್ವವನ್ನು ಉದ್ಯಮಿ ಝಫರ್ ಸರೇಶ್ ವಾಲಾ ವಹಿಸಲಿದ್ದರೆ, ಗುಜರಾತ್ ಹಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ಅಲಿ ಖಾದ್ರಿ ಇನ್ನೊಬ್ಬ ಸದಸ್ಯರಾಗಲಿದ್ದಾರೆ.

ಭಾರತದಿಂದ ತೆರಳಿರುವ 1.36 ಲಕ್ಷಕ್ಕೂ ಹೆಚ್ಚು ಹಜ್ ಯಾತ್ರಿಕರ ಪ್ರತಿನಿಧಿಗಳಾಗಿ ಅವರಿಬ್ಬರೂ ಸೆಪ್ಟೆಂಬರ್ 5 ರಂದು ಇಲ್ಲಿಂದ ಹೊರಟು ಸೆಪ್ಟೆಂಬರ್ 27ರ ವರೆಗೆ ಸೌದಿ ಅರೇಬಿಯಾದಲ್ಲಿರುತ್ತಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ ಮಧ್ಯ ಪೂರ್ವ ದೇಶಗಳಿಗೆ ನೀಡಿದ ಭೇಟಿಯ ಸಂದರ್ಭ ಆಶಿಸಿದಂತೆ ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಬಲಗೊಳಿಸಲು ಪ್ರಯತ್ನಿಸುವುದಾಗಿ ಸರೇಶ್ ವಾಲ ಹೇಳಿದ್ದಾರೆ. ತಮ್ಮ 21 ದಿನಗಳ ಸೌದಿ ಅರೇಬಿಯಾ ಕರ್ತವ್ಯದ ಸಂದರ್ಭ ಅವರು ಸೌದಿ ದೊರೆಯೊಂದಿಗೆ ಭೋಜನವನ್ನೂ ಸವಿಯಲಿದ್ದಾರೆ. ಎರಡೂ ದೇಶಗಳ ನಡುವಣ ಸಾಂಸ್ಕೃತಿಕ ಬಾಂಧವ್ಯವನ್ನೂ ವೃದ್ಧಿಸುವುದಾಗಿ ಅವರು ಹೇಳಿದ್ದಾರೆ.

ಅತ್ತ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾಗಿರುವ ಖಾದ್ರಿಯವರು ಹಜ್ ಯಾತ್ರೆಗೆ ಭಾರತೀಯ ಯಾತ್ರಾರ್ಥಿಗಳಿಗಾಗಿನ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಲಿದ್ದಾರೆ. ‘‘ನಮ್ಮ ದೇಶದ ಮುಸ್ಲಿಂ ಜನಸಂಖ್ಯೆಯನ್ನು ಗಮನದಲ್ಲಿರಿಸಿ ನಮ್ಮ ದೇಶದಿಂದ ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಹಜ್ ಯಾತ್ರೆಗೆ ತೆರಳಲು ಅನುಮತಿಸಲು ಸೌದಿ ಸರಕಾರವನ್ನು ಅವರು ಆಗ್ರಹಿಸಲಿದ್ದಾರೆ.

‘‘ನಮ್ಮ ಹಜ್ ಯಾತ್ರಿಕರಿಗೆ ದೊರಕುವ ಸೌಲಭ್ಯಗಳನ್ನು ಉತ್ತಮಗೊಳಿಸಲೂ ನಾವು ಶ್ರಮಿಸಲಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ. ‘‘ಹೆಚ್ಚಿನ ಯಾತ್ರಿಗಳಿಗೆ ಹರಾಮ್ ಶರೀಫ್ ನಿಂದ ಬಹಳ ದೂರ ವಸತಿ ಸೌಲಭ್ಯ ದೊರೆಯುತ್ತದೆ. ಮಹಿಳೆಯರು, ವೃದ್ಧರಿಗೆ ಇದು ತ್ರಾಸದಾಯಕ. ಭಾರತೀಯ ಯಾತ್ರಿಗಳಿಗೆ ಹರಾಂ ಶರೀಫ್ ಹತ್ತಿರದಲ್ಲಿಯೇ ವಸತಿ ಸೌಲಭ್ಯ ಒದಗಿಸುವಂತೆ ಕೇಳಿಕೊಳ್ಳಲಾಗುವುದು,’’ ಎಂದು ಖಾದ್ರಿ ಹೇಳಿದ್ದಾರೆ.

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಮರಿಗೆ ನೀಡಲಾಗಿರುವ ಹಲವಾರು ಹಕ್ಕುಗಳ ಬಗ್ಗೆಯು ಅಲ್ಲಿನ ಸರಕಾರಕ್ಕೆ ಈ ದ್ವಿಸದಸ್ಯ ನಿಯೋಗ ವಿವರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News