ಕಾಸರಗೋಡು: ಪೆರಡಾಲ ಕ್ಷೇತ್ರದಿಂದ ಕದ್ದ ಹುಂಡಿಯ ಹಣವನ್ನು ಹೂತಿಟ್ಟಿದ್ದ ಕಳ್ಳ!
ಕಾಸರಗೋಡು, ಸೆ.2: ಬದಿಯಡ್ಕ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಿಂದ ಕಳವು ನಡೆಸಿದ ಹುಂಡಿ ಹಣದಲ್ಲಿ 12,088 ರೂ. ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಂಧಿತ ಆರೋಪಿ ಪೆರಡಾಲ ಶಾಂತಿಪಳ್ಳದ ವೆಂಕಪ್ಪ ನಾಯ್ಕ್ (27) ನನ್ನು ಕ್ಷೇತ್ರಕ್ಕೆ ಕರೆತಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದು, 400 ಮೀಟರ್ ದೂರದ ಖಾಸಗಿ ವ್ಯಕ್ತಿಯೋರ್ವರ ಹಿತ್ತಲಿನಲ್ಲಿ ಅಲ್ಯೂಮಿನಿಯಂ ಪಾತ್ರೆ ಮತ್ತು ಗೋಣಿ ಚೀಲದಲ್ಲಿ ಹಣ ಪತ್ತೆಯಾಗಿದೆ. ಕಳವುಗೈದ ಹಣದ ಪೈಕಿ 38 ಸಾವಿರ ರೂ.ಗಳನ್ನು ಬಂಧಿಸುವ ಸಂದರ್ಭದಲ್ಲಿ ಈತನಿಂದ ವಶಪಡಿಸಿಕೊಳ್ಳಲಾಗಿತ್ತು.
ಹುಂಡಿಯಿಂದ ಕಳವುಗೈದ ಹಣದಲ್ಲಿ ನೋಟುಗಳನ್ನು ಈತ ತೆಗೆದು ನಾಣ್ಯಗಳನ್ನು ಬಚ್ಚಿಟ್ಟಿದ್ದ.ನಾಣ್ಯ ಗಳು ಭಾರವಾಗಿದ್ದ ಹಿನ್ನೆಲೆಯಲ್ಲಿ ಹೊತ್ತು ಕೊಂಡೊಯ್ಯಲು ಸಾಧ್ಯವಾಗದೆ ಅದನ್ನು ಗೋಣಿ ಚೀಲದಲ್ಲಿ ತುಂಬಿಸಿ ಮಣ್ಣಿನಡಿ ಹೂತು ಹಾಕಿರುವುದಾಗಿ ಆರೋಪಿ ತಿಳಿಸಿದ್ದಾನೆ.
ಆ.28ರಂದು ರಾತ್ರಿ ಕ್ಷೇತ್ರದಿಂದ ಕಳವು ನಡೆದಿತ್ತು. ಕಳವಿನ ಬಳಿಕ ತಲೆ ಕೂದಲು, ಗಡ್ಡ ಬೋಳಿಸಿಕೊಂಡಿದ್ದ ಆರೋಪಿಯನ್ನು ಬೇಕಲಕೋಟೆ ಬಳಿ ಆ. 31ರಂದು ಅಲ್ಲಿನ ಪೊಲೀಸರು ಬಂಧಿಸಿ ಬದಿಯಡ್ಕ ಪೊಲೀಸರಿಗೆ ಹಸ್ತಾಂತರಿಸಿದ್ದರು.
ಪೆರಡಾಲ ಬಳಿಯ ಶಾಂತಿಪಳ್ಳ ನಿವಾಸಿಯಾದ ರಾಮ ನಾಯ್ಕ ಎಂಬವರ ಪುತ್ರನಾದ ವೆಂಕಪ್ಪ ನಾಯ್ಕ 2011ರಲ್ಲಿ ತಾಯಿ ಕಮಲರನ್ನು ಕೊಲೆಗೈದ ಪ್ರಕರಣದ ಆರೋಪಿಯಾಗಿದ್ದಾನೆ. ಇದರಿಂದ ಸೆರೆಗೀಡಾಗಿ ಜೈಲು ಶಿಕ್ಷೆ ಅನುಭವಿಸಿ ಒಂದು ವರ್ಷ ಹಿಂದೆ ಬಿಡುಗಡೆಗೊಂಡಿದ್ದನು. ಬಳಿಕ ತಮಿಳ್ನಾಡಿನ ತಿರುಚ್ಚಿರಾಪಳ್ಳಿ ಯ ಹೋಟೆಲವೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಇತ್ತೀಚೆಗೆ ಊರಿಗೆ ಬಂದ ಆತನನ್ನು ಮನೆಗೆ ಸೇರಿಸಿಕೊಂಡಿರಲಿಲ್ಲ. ಇದರಿಂದ ಬದಿಯಡ್ಕ ಪೇಟೆಯ ವಿವಿಧೆಡೆ ಹಗಲುರಾತ್ರಿ ಕಳೆಯುತ್ತಿದ್ದ ಆತ ಆ.28ರಂದು ಪೆರಡಾಲ ಕ್ಷೇತ್ರಕ್ಕೆ ನುಗ್ಗಿ ಆರು ಕಾಣಿಕೆ ಹುಂಡಿಗಳನ್ನು ಕಳವುಗೈದು ಅದರಲ್ಲಿದ್ದ ಹಣವನ್ನು ದೋಚಿದ್ದ.