×
Ad

ಸ್ವಾರ್ಥ ಭರಿತ ಶಿಕ್ಷಣದಿಂದ ಸಮಾಜ ಸುಧಾರಣೆಯಾಗದು: ಸಚಿವ ರಾಯರೆಡ್ಡಿ

Update: 2016-09-02 15:38 IST

ಮಂಗಳೂರು, ಸೆ.2: ನಮ್ಮ ಶಿಕ್ಷಣ ವ್ಯವಸ್ಥೆಯು ವೈಯಕ್ತಿಕ ಹಾಗೂ ಕುಟುಂಬದ ಹಿತದೃಷ್ಟಿಗೆ ಮಾತ್ರವೇ ಒತ್ತು ನೀಡುತ್ತಿರುವುದರಿಂದ ಇಂತಹ ಶಿಕ್ಷಣದಿಂದ ಸಮಾಜದ ಸುಧಾರಣೆ ಸಾಧ್ಯವಿಲ್ಲ. ಇಂತಹ ಮನೋಭಾವ ಬದಲಾಗಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಎರಡನೆ ದಿನವಾದ ಇಂದು ‘ಪ್ರಜ್ಞಾ' ಎಂಬ ಕಾಲೇಜು ಉಪನ್ಯಾಸಕರಿಗಾಗಿನ ವಿಚಾರಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.

ಉದ್ಯೋಗದ ಹಿನ್ನೆಲೆಯಲ್ಲಿಯೇ ಶಿಕ್ಷಣ ಪಡೆಯುವುದು ಸ್ವಾರ್ಥವೇ ಹೊರತು ಇನ್ನೇನು ಅಲ್ಲ. ಇಂದಿನ ಶಿಕ್ಷಣದ ಈ ಮನೋಸ್ಥಿತಿ ಬದಲಾಗಬೇಕು. ನೈತಿಕತೆಯನ್ನು ಮಕ್ಕಳಲ್ಲಿ ತುಂಬುವ ಜತೆಗೆ ವೌಢ್ಯಗಳಿಂದ ದೂರವಿದ್ದು, ಸಮಾಜದ ಹಿತಚಿಂತನೆಗೆ ಆದ್ಯತೆ ನೀಡುವ ವೌಲ್ಯಯುತ ಅಂಶಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಸಲಹೆ ನೀಡಿದರು.

ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ಮಹತ್ವದ ಅಡಿಪಾಯ. ಗುಣಮಟ್ಟದ ಶಿಕ್ಷಣ, ಮನುಷ್ಯನನ್ನು ಸನ್ನಡತೆಯಿಂದ ಬಾಳಲು ಪ್ರೇರೇಪಿಸುತ್ತದೆ. ಶಿಕ್ಷಣ ಇಲ್ಲದೆ ಹೊಸ ಅವಿಷ್ಕಾರಗಳು ಹುಟ್ಟಲೂ ಸಾಧ್ಯವಿಲ್ಲ. ಮಂಗಳೂರಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಅದರಿಂದಾಗಿಯೇ ಮಂಗಳೂರಿಗರು ಬುದ್ಧಿವಂತರಾಗಿ ಮಾತ್ರವಲ್ಲ, ವಿನಯವಂತರು, ಸಂಸ್ಕಾರವಂತರು ಹಾಗೂ ಸಹನಶೀಲರಾಗಿ ಗುರುತಿಸಿಕೊಂಡಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ದಿಕ್ಸೂಚಿ ಭಾಷಣ ಮಾಡಿದ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಾಂದಜಿ, ಒಳಿತು ಕೆಡುಕುಗಳ ಅರಿವು ಮೂಡಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಕೆ.ಭೈರಪ್ಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಸ್ವಾಮಿ ನಿಖಿಲೇಶ್ವರನಂದಜಿ, ಸ್ವಾಮಿ ಬೋಧಮಯನಂದಜಿ ಉಪಸ್ಥಿತರಿದ್ದರು. ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಯಾವ ರಾಜಕಾರಣಿಗಳೂ ಪ್ರಾಮಾಣಿಕರಾಗಿಲ್ಲ!

ಇಂದಿನ ರಾಜಕಾರಣಿಗಳೇ ಸರಿಯಿಲ್ಲ. ಯಾರೂ ಪ್ರಾಮಾಣಿಕರಾಗಿಲ್ಲ. ಹಣ ಮಾಡುವ ಸ್ವಾರ್ಥವೇ ಹೆಚ್ಚಿನವರಲ್ಲಿದೆ. ಅಧಿಕಾರ ವ್ಯಾಮೋಹ. ಇದಕ್ಕಾಗಿಯೇ ರಾಜಕೀಯಕ್ಕೆ ಬರುತ್ತಾರೆಯೇ ಹೊರತು ಸಮಾಜದ ಅಭಿವೃದ್ಧಿಯ ಚಿಂತನೆ ಇಲ್ಲವಾಗಿದೆ. ನಾನೂ ಒಂದು ರೀತಿಯಲ್ಲಿ ಸ್ವಾರ್ಥಿಯೇ ಆಗಿಬಿಟ್ಟಿದ್ದೇನೆ. ಈ ವ್ಯವಸ್ಥೆಯನ್ನು ತಿದ್ದುಪಡಿ ಮಾಡುವ ಕಾರ್ಯ ಆಗಬೇಕು ಎಂದು ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News