ಫ್ರಾನ್ಸ್‌ನ ಆಗಸದಲ್ಲಿ ಟೀಮ್ ಮಂಗಳೂರು ಗಾಳಿಪಟ!
ಮಂಗಳೂರು, ಸೆ.2: ಫ್ರಾನ್ಸ್‌ನ ಡೀಪಿ ನಗರದಲ್ಲಿ ಸೆ.10ರಿಂದ 18ರವರೆಗೆ ನಡೆಯುವ ಪ್ರಪಂಚದ ಅತೀ ದೊಡ್ಡ ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಭಾಗವಹಿಸುತ್ತಿದ್ದು, ಈ ಬಾರಿ ‘ದಂಪತಿ’ ಹಾಗೂ ‘ಆದಿವಾಸಿ’ ವಿಶೇಷ ಗಾಳಿಪಟಗಳು ಫ್ರಾನ್ಸ್‌ನ ಆಗಸದಲ್ಲಿ ಹಾರಾಡಲಿವೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಟೀಮ್ ಮಂಗಳೂರು ತಂಡದ ಸರ್ವೇಶ್ ರಾವ್, ಪ್ರಾಯೋಜಕರ ಕೊರತೆಯಿಂದಾಗಿ ತಂಡದ ಇಬ್ಬರು ಸದಸ್ಯರಾದ ದಿನೇಶ್ ಹೊಳ್ಳ ಮತ್ತು ಸತೀಶ್ ರಾವ್ ಮಾತ್ರವೇ ಈ ಬಾರಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.
ಡೀಪಿ ಕ್ಯಾಪಿಟಲ್ ಆಫ್ ಕೈಟ್ಸ್ ಆಯೋಜಿಸುತ್ತಿರುವ 36ನೆ ವರ್ಷದ ಗಾಳಿಪಟ ಉತ್ಸವ ಇದಾಗಿದ್ದು, ಟೀಮ್ ಮಂಗಳೂರು ತಂಡವು ಇದೀಗ ಏಳನೆ ಬಾರಿಗೆ ಈ ಉತ್ಸವದಲ್ಲಿ ಪಾಲೊಳ್ಳುತ್ತಿದೆ. ತಂಡದ 36 ಅಡಿ ಎತ್ತರದ ಕಥಕ್ಕಳಿ ಗಾಳಿಪಟ ಭಾರತದಲ್ಲೇ ಅತೀ ದೊಡ್ಡ ಗಾಳಿಪಟವೆಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ. ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಪ್ರಚಾರ ಮಾಡುವುದು ತಂಡದ ಮೂಲ ಉದ್ದೇಶವಾಗಿದೆ ಎಂದವರು ಹೇಳಿದರು.
ಭಾರತೀಯ ಉಡುಗೆ, ತೊಡುಗೆ, ವಸ್ತ್ರ ವಿನ್ಯಾಸಗಳಿಗೆ ಯೂರೋಪ್ ದೇಶದಲ್ಲಿ ತುಂಬಾ ಬೇಡಿಕೆ ಮತ್ತು ಮೆಚ್ಚುಗೆ ಇರುವುದರಿಂದ ಈ ಬಾರಿ ಉತ್ಸವಕ್ಕೆ 18 ಅಡಿ ಎತ್ತರ ಹಾಗೂ 12 ಅಗಲದ ದಂಪತಿ ಎಂಬ ಎಂಬ ವಿಶೇಷ ಗಾಳಿಪಟವನ್ನು ರಚಿಸಿದೆ. ಕಚ್ಚೆ, ಗೆಜ್ಜೆ, ಮುಂಡಾಸು, ಸೀರೆ ಉಟ್ಟಂತಹ ಭಾರತೀಯ ಸಾಂಪ್ರದಾಯಿಕ ಉಡುಗೆ, ತೊಡುಗೆಯ ಪರಿಕಲ್ಪನೆಯನ್ನು ಈ ಡೆಲ್ಟಾ ಗಾಳಿಪಟದಲ್ಲಿ ಚಿತ್ರಿಸಲಾಗಿದೆ. ಇನ್ನೊಂದು ಆದಿವಾಸಿ ಎಂಬ ವರ್ಣಕಲಾ ಪ್ರಕಾರದ ಗಾಳಿಪಟವನ್ನು ರೋಕ್ಯಾಕೋ ಮಾದರಿಯಲ್ಲಿ ರಚಿಸಲಾಗಿದೆ. ಈ ಎರಡೂ ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣ ಸಂಯೋಜನೆ ದಿನೇಶ್ ಹೊಳ್ಳರದ್ದಾಗಿದ್ದು, ರಚನೆಯಲ್ಲಿ ಪ್ರಾಣೇಶ್, ಸತೀಶ್ ರಾವ್ ಸಹಕರಿಸಿದ್ದಾರೆ. ಕಸೂತಿ, ಸೂತ್ರ ಹಾಗೂ ಹೊಲಿಗೆಯನ್ನು ತಾನು ಮಾಡಿರುವುದಾಗಿ ಸರ್ವೇಶ್ ರಾವ್ ವಿವರ ನೀಡಿದರು.
48 ದೇಶಗಳು ಭಾಗವಹಿಸುತ್ತಿರುವ ಯುರೋಪ್‌ನ ಈ ಗಾಳಿಪಟ ಉತ್ಸವದ ಪ್ರಚಾರಕ್ಕೆ ಬಳಸುವ ಪೋಸ್ಟರ್‌ಗೆ ಕಲಾವಿದ ದಿನೇಶ್ ಹೊಳ್ಳರ ಕಲಾಕೃತಿ ಆಯ್ಕೆಯಾಗಿದೆ. ಭಾರತೀಯ ಹಾಗೂ ಫ್ರೆಂಚ್ ಸಂಸ್ಕೃತಿಯನ್ನು ಮಿಶ್ರಗೊಳಿಸಿ ಡೀಪಿ ನಗರದ ಮೀನುಗಾರಿಕಾ ಬಂದರು ಪ್ರದೇಶವನ್ನು ಈ ಪೋಸ್ಟರ್‌ನ ವಿನ್ಯಾಸದಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
36 ಮೀಟರ್ ಉದ್ದದ ಇಂಡಿಯನ್ ಟ್ರೈಬಲ್ ಕಲಾಕೃತಿ ರಚನೆ
36ನೆ ವರ್ಷದ ಉತ್ಸವ ಇದಾಗಿರುವುದರಿಂದ 36 ಅಡಿ ಉದ್ದದ ಕ್ಯಾನ್ವಸ್‌ನಲ್ಲಿ ಅಲ್ಲಿ 8 ದಿನಗಳಲ್ಲಿ ದಿನೇಶ್ ಹೊಳ್ಳರವರು ಭಾರತೀಯ ಬುಡಕಟ್ಟು ಜನಾಂಗದ ಜೀವನ ಶೈಲಿ, ಸಂಸ್ಕೃತಿ, ಪದ್ಧತಿ,ಧಾರ್ಮಿಕ ರೀತಿ ನೀತಿ, ನೃತ್ಯ, ಬೇಟೆಯ ಶೈಲಿಯನ್ನು ರೇಖೆ, ವರ್ಣಗಳಲ್ಲಿ ಚಿತ್ರಿಸಲಿದ್ದಾರೆ. ಭಾರತದ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ರಾಜ್ಯಗಳ ಬುಡಕಟ್ಟು ಜನಾಂಗದ ಕುರಿತ ಚಿತ್ರಗಳು ಇಲ್ಲಿ ಮೂಡಿಬರಲಿದೆ ಎಂದು ಅವರು ಹೇಳಿದರು.
ಕಲಾಕೃತಿಗಳಲ್ಲಿ ಲಭಿಸುವ ಆರ್ಥಿಕ ಮೊತ್ತವನ್ನು ಪಶ್ಚಿಮಘಟ್ಟದ ಬುಡಕಟ್ಟು ಜನಾಂಗದ ಮಕ್ಕಳ ಶಿಕ್ಷಣಕ್ಕೆ ಅಥವಾ ಇನ್ನಿತರ ಅವರ ಬೇಡಿಕೆಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ. ಉತ್ಸವದ ಪ್ರದರ್ಶನದ ಭಾಗವಾಗಿ ರಾಗಲೇಖಾ ಎಂಬ ಚಿತ್ರಕಲಾ ಪ್ರದರ್ಶನವನ್ನು ದಿನೇಶ್ ಹೊಳ್ಳ ಮಾಡಲಿದ್ದಾರೆ.
ಗೋಷ್ಠಿಯಲ್ಲಿ ಟೀಮ್ ಮಂಗಳೂರು ತಂಡದ ಸತೀಶ್ ರಾವ್, ಪ್ರಾಣೇಶ್, ಸ್ವಪ್ನ ನೊರೊನ್ನಾ ಮೊದಲಾದವರು ಉಪಸ್ಥಿತರಿದ್ದರು.
ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಯುನೆಸ್ಕೋಗೆ ಮನವಿ
ವಿಶೇಷವೆಂದರೆ, ಪಶ್ಚಿಮಘಟ್ಟದ ರಕ್ಷಣೆ ಹಾಗೂ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ದ ಯುನೆಸ್ಕೋಗೆ ಮನವಿ ಸಲ್ಲಿಸಲು ಮಂಗಳೂರು ಟೀಮ್ ನಿರ್ಧರಿಸಿದೆ. ಈಗಾಗಲೇ ಪುಷ್ಪಗಿರಿ (ಕುಮಾರ ಪರ್ವತ) ಯುನೆಸ್ಕೋದ ಸಂರಕ್ಷಿತ ಪ್ರದೇಶವಾಗಿ ಆಯ್ಕೆಯಾಗಿದ್ದು, ಅದರ ಸಮೀಪದ ಬೆಟ್ಟಕುಮರಿ, ಕೆಂಚನ ಕುಮೇರಿ, ಕಾಗೆನಿರೆ ಅರಣ್ಯ ಪ್ರದೇಶಕ್ಕೆ ಎತ್ತಿನ ಹೊಳೆ ಯೋಜನೆಯಿಂದ ಪ್ರಾಕೃತಿಕವಾಗಿ ಸಮಸ್ಯೆ ಆಗಲಿದೆ. ಫ್ರಾನ್ಸ್‌ನ ಡೀಪಿ ನಗರದಲ್ಲಿ ನಡೆಯಲಿರುವ ಗಾಳಿಪಟ ಉತ್ಸವಕ್ಕೆ 48 ದೇಶಗಳಿಂದ ಪ್ರತಿನಿಧಿಗಳು ಆಗಮಿಸಲಿದ್ದು, ಇವರೆಲ್ಲರಿಗೂ ಈ ಸಂದರ್ಭದಲ್ಲಿ ಪಶ್ಚಿಮಘಟ್ಟ ಉಳಿವಿನ ಬಗ್ಗೆ ಮಾಹಿತಿ ಹಾಗೂ ವೀಡಿಯೊ ಪ್ರದರ್ಶನ ನಡೆಯಲಿದೆ. ಹಾಗೂ ಪಶ್ಚಿಮಘಟ್ಟ ರಕ್ಷಣೆಗೆ ಬೆಂಬಲಿಸುವಂತೆ ಹೊರದೇಶಗಳ ಪ್ರತಿನಿಧಿಗಳಿಂದ ಸಹಿಯನ್ನು ಪಡೆದುಕೊಳ್ಳಲಾಗುತ್ತದೆ. ಬಳಿಕ ಆ ಮನವಿಯನ್ನು ಯುನೆಸ್ಕೋಗೆ ಸಲ್ಲಿಸಲಾಗುವುದು ಎಂದು ಕಲಾವಿದ ದಿನೇಶ್ ಹೊಳ್ಳ ತಿಳಿಸಿದರು.