×
Ad

ಪಡುಮಲೆ ಕ್ಷೇತ್ರದಲ್ಲಿ ಗೊಂದಲ ಎಬ್ಬಿಸುವ ಷಡ್ಯಂತ್ರ : ರವಿರಾಜ್ ಶೆಟ್ಟಿ

Update: 2016-09-02 17:18 IST

ಪುತ್ತೂರು, ಸೆ.2: ಪುತ್ತೂರು ತಾಲೂಕಿನ ಪಡುಮಲೆಯ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯ ಮತ್ತು ಪೂಮಾಣಿ-ಕಿನ್ನಿಮಾಣಿ ದೈವಸ್ಥಾನದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಆರಂಭಿಸಲಾದ ಪ್ರಾಯಶ್ಚಿತ ಕಾರ್ಯಗಳಿಗೆ ಅಡ್ಡಿ ಪಡಿಸುವ ಮೂಲಕ ಗೊಂದಲ ಎಬ್ಬಿಸುವ ಷಡ್ಯಂತ್ರ ನಡೆದಿದ್ದು, ತಂತ್ರಿ ಬದಲಾವಣೆ ವಿಚಾರದಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ  ತಿಳಿಸಿದರು.

ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಊರಿನ ಹಿತಕ್ಕಾಗಿ ಈ ದೇವಾಲಯ ಮತ್ತು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯಲೇಬೇಕಿದ್ದು, ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಮೊದಲಾಗಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೋಷ ನಿವಾರಣೆಗಾಗಿ ಪ್ರಾಯಶ್ಚಿತ ಹೋಮಾಧಿಗಳನ್ನು ನಡೆಸಲು ನಾವು ತೀರ್ಮಾನಿಸಿದ್ದೆವು. ಕುಂಟಾರು ತಂತ್ರಿಗಳ ಬಳಿಗೆ ಈ ಕುರಿತು ಮಾತನಾಡಲು ಹಲವು ಬಾರಿ ಹೋಗಿದ್ದೆವು, ಆದರೆ ಅವರಿಂದ ಸರಿಯಾದ ಮಾರ್ಗದರ್ಶನ ಸಿಗದ ಮತ್ತು ಅಸಹಕಾರ ನೀತಿಯಿಂದಾಗಿ ಅನಿವಾರ್ಯವಾಗಿ ನಾವು ಕೆಮ್ಮಿಂಜೆ ನಾಗೇಶ್ ತಂತ್ರಿ ಅವರನ್ನು ಸಂಪರ್ಕಿಸಬೇಕಾಗಿ ಬಂತು. ತಂತ್ರಿ ಬದಲಾವಣೆ ವಿಚಾರದಲ್ಲಿ ಮತ್ತೆ ಪ್ರಶ್ನಾ ಚಿಂತನೆ ನಡೆಸಿ, ಚಿಂತನೆಯಲ್ಲಿ ಕಂಡು ಬಂದಂತೆ ತಂತ್ರಿ ಬದಲಾವಣೆ ಮಾಡಲಾಯಿತೇ ಹೊರತು ಕುಂಟಾರು ತಂತ್ರಿ ಮನೆತನಕ್ಕೆ ಅಗೌರವ ತೋರುವ ಉದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜುಲೈ 12ರಂದು ದೈವಜ್ಞ ಉಡುಪಿ ಬೈಲೂರಿನ ಮುರಳೀಧರ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿತ್ತು. ಕುಂಟಾರು ರವೀಶ ತಂತ್ರಿಗಳಿಗೂ ಈ ಬಗ್ಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಬಂದಿರಲಿಲ್ಲ. ಪ್ರಶ್ನಾ ಚಿಂತನೆಯಲ್ಲಿ ತಂತ್ರಿಗಳ ಬದಲಾವಣೆ ದೈವಚಿತ್ತ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಶ್ನಾ ಚಿಂತನೆಯ ವೇಳೆ ಉಪಸ್ಥಿತರಿದ್ದ ಕೆಮ್ಮಿಂಜೆ ನಾಗೇಶ ತಂತ್ರಿಗಳು ಪೌರೋಹಿತ್ಯ ವಹಿಸಿಕೊಳ್ಳಲು ಸಾರ್ವಜನಿಕರ ಮುಂದೆ ಒಪ್ಪಿಕೊಂಡಿದ್ದರು. ಇದರಂತೆ ಮತ್ತೆ ಆ.27,30 ಮತ್ತು 31ರಂದು ಗ್ರಾಮಸ್ಥರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದೋಷ ಪರಿಹಾರಾರ್ಥ ಪ್ರಾಯಶ್ಚಿತ ಹೋಮಾದಿಗಳನ್ನು ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ದೋಷ ಪರಿಹಾರಕ್ಕಾಗಿ ಪೂಮಾಣಿ-ಕಿನ್ನಿಮಾಣಿ ಕ್ಷೇತ್ರದಲ್ಲಿ ಪ್ರಾಯಶ್ಚಿತ ಹೋಮಗಳನ್ನು ಆರಂಭಿಸಿದ ಬೆನ್ನಲ್ಲೇ ಕುಂಟಾರು ವಾಸುದೇವ ತಂತ್ರಿ ಅವರು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿದ್ದು, ಮತ್ತೆ ಗೊಂದಲಕ್ಕೆ ಕಾರಣವಾಗಿದೆ. ಪೂಮಾಣಿ -ಕಿನ್ನಿಮಾಣಿ ದೈವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲು ದಿನ ನಿಗದಿ ಪಡಿಸಿಕೊಟ್ಟವರೇ ಕುಂಟಾರು ರವೀಶ ತಂತ್ರಿಗಳು. ಆ ಪ್ರಶ್ನಾ ಚಿಂತನೆಯ ನಿವೃತ್ತಿ ರಾಶಿಯೂ ಅವರ ಉಪಸ್ಥಿತಿಯಲ್ಲಿಯೇ ನಡೆದಿತ್ತು. ಈ ಹಿಂದೆ ಕುಂಟಾರಿನ ಸುಬ್ರಾಯ ತಂತ್ರಿಗಳ ಹಾಗೂ ರವೀಶ ತಂತ್ರಿಗಳ ನೇತೃತ್ವದಲ್ಲೇ ಕ್ಷೇತ್ರದಲ್ಲಿನ ಎಲ್ಲಾ ಧಾರ್ಮಿಕ ಕಾರ್ಯಗಳು ನಡೆದು ಬಂದಿರುವುದರಿಂದ ಆ ತಂತ್ರಿ ಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ಆ ಮನೆತನದ ತಂತ್ರಿಗಳನ್ನು ಕಡೆಗಣಿಸುವ ಇಲ್ಲವೇ ಅಗೌರವ ತೋರುವ ಉದ್ದೇಶ ನಮಗಿಲ್ಲ. ಆದರೆ ಪಡುಮಲೆ ಕ್ಷೇತ್ರಕ್ಕೆ ಈ ತನಕ ಬಾರದ ವಾಸುದೇವ ತಂತ್ರಿಗಳ ಗೊಂದಲಕಾರಿ ಹೇಳಿಕೆಯ ಉದ್ದೇಶ ಏನೆಂಬುವುದು ಅರ್ಥವಾಗುತ್ತಿಲ್ಲ ಎಂದರು.

ಜೀಣೋದ್ಧಾರ ಸಮಿತಿಯ ಸದಸ್ಯ ಕೆ.ಪಿ.ಸಂಜೀವ ರೈ ಅವರು ಮಾತನಾಡಿ ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಕಳೆದ 24 ವರ್ಷಗಳಿಂದ ಬ್ರಹ್ಮಕಲಶೋತ್ಸವ ನಡೆದಿಲ್ಲ. ದೇವಾಲಯ ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿದೆ. ಪಡುಮಲೆ ಕ್ಷೇತ್ರದ ಅಭಿವೃದ್ಧಿಗೆ ರೂ.5 ಕೋಟಿ ಮಂಜೂರು ಆಗಿದ್ದರೂ ಅದನ್ನು ಖರ್ಚು ಮಾಡಲು ಸಾಧ್ಯವಾಗಿಲ್ಲ. ಕಳೆದ 14 ವರ್ಷಗಳಿಂದ ದೇವಾಲಯದ ದೈವಿಕ ಶಕ್ತಿ ಕಡಿಮೆಯಾಗಿದ್ದು, ಇದು ಕ್ಷೇತ್ರ ವ್ಯಾಪ್ತಿಯ ಜನತೆಗೆ ದೋಷವಾಗಿ ತಟ್ಟುತ್ತಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಕುಂಟಾರು ಸುಬ್ರಾಯ ತಂತ್ರಿಗಳು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯನಡೆಸಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಬೇಕೆಂದು ಮಾರ್ಗದರ್ಶನ ನೀಡಿದ್ದರು. ಆದರೂ ದೇವಾಲಯದಲ್ಲಿ ಯಾವುದೇ ಜೀರ್ಣೋದ್ಧಾರ-ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದರು.

ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಕನ್ನಾಯ, ಸಮಿತಿ ಸದಸ್ಯರಾದ ಗ್ರಾಮ ಪಂಚಾಯತ್ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಮತ್ತು ಸಮಿತಿ ಸದಸ್ಯ ರಾಮಕೃಷ್ಣ ನಾಯ್ಕ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News