ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರಕಾರದ ಸಹಕಾರವೂ ಅಗತ್ಯ: ಸಚಿವ ಬಸವರಾಜ ರಾಯರೆಡ್ಡಿ

Update: 2016-09-02 12:39 GMT

ಕೊಣಾಜೆ, ಸೆ.2: ಕೇಂದ್ರದಲ್ಲಿ ವಾಜಪೇಯಿ ಸರಕಾರ ಇದ್ದಾಗ ಸರ್ವಶಿಕ್ಷಣ ಅಭಿಯಾನ ಜಾರಿಗೆ ತರಲಾಗಿದ್ದು, ಮನ್‌ಮೋಹನ್ ಸಿಂಗ್ ಸರಕಾರದಲ್ಲೂ ಮುಂದುವರಿಸಲಾಯಿತು, ಯುಪಿಎ 2 ಅಧಿಕಾರಕ್ಕೆ ಬಂದಾಗ ರೂಸಾ ಯೋಜನೆ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅನುದಾನ ನೀಡಲಾಗುತ್ತಿತ್ತು. ಆದರೆ ಮೋದಿ ಸರಕಾರ ಬಂದ ಬಳಿಕ ಕಳೆದ ಎರಡು ವರ್ಷದಿಂದ ಅನುದಾನ ಸ್ಥಗಿತಗೊಳಿಸಿ 60-40 ನಿಯಮ ಹೇಳಲಾಗುತ್ತಿದೆ. ಇದರಿಂದಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕಡಿವಾಣ ಬಿದ್ದಿದ್ದು, ಈ ಬಗ್ಗೆ ಕೇಂದ್ರ ಸಚಿವರಲ್ಲಿ ಮಾತುಕತೆ ನಡೆಸಲಾಗಿದ್ದು, ಕೇಂದ್ರದಿಂದ ಹೆಚ್ಚು ಅನುದಾನ ಬಂದಲ್ಲಿ ಅನುಕೂಲವಾಗುತ್ತದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಶುಕ್ರವಾರ ಮುಡಿಪುವಿನಲ್ಲಿರುವ ಸರಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿ ಕಾಲೇಜಿಗೆ ಮಂಜೂರಾದ ಜಮೀನು ಪರಿಶೀಲಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದಲ್ಲಿ 412 ಸರಕಾರಿ ಶಿಕ್ಷಣ ಸಂಸ್ಥೆಗಳಿದ್ದು 24.50 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. 50 ಕಾಲೇಜುಗಳಲ್ಲಿ ಮಾತ್ರವೇ ಶಾಶ್ವತ ಪ್ರಾಂಶುಪಾಲರಿದ್ದಾರೆ, ಶಿಕ್ಷಕರ ಕೊರತೆಯೂ ಇದೆ. ಶಿಕ್ಷಕರ ವೇತನಕ್ಕಾಗಿ 20 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತಿದ್ದು ಉಳಿದ ಅನುದಾನದಲ್ಲಿ ಬಿಸಿಯೂಟ, ಸಮವಸ್ತ್ರ, ಮೊಟ್ಟೆ, ಹಾಲು, ಬಾಳೆಹಣ್ಣು ಹೀಗೆ ಪೌಷ್ಠಿಕ ಆಹಾರ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ಬೇಕಾದ ಪೀಠೋಪಕರಣಕ್ಕೆ ಅನುದಾನದ ಕೊರತೆ ಎದುರಾಗಿದೆ ಎಂದು ಹೇಳಿದರು.

ಮುಡಿಪುವಿನಲ್ಲಿರುವ ಪದವಿಪೂರ್ವ ಕಾಲೇಜಿನ ಸಮಸ್ಯೆ ಬಗ್ಗೆ ಅರಿತುಕೊಂಡಿದ್ದೇನೆ. ಶಾಲೆಗೆ ಕಟ್ಟಡ ನಿರ್ಮಾಣ ನಿಟ್ಟಿನಲ್ಲಿ ಈಗಾಗಲೇ 2 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲಾಗಿದ್ದು ಮುಂದಿನ ತಿಂಗಳು ಗುತ್ತಿಗೆ ಕಂಪೆನಿ ಮೂಲಕ ಕಾಮಗಾರಿಗೆ ಚಾಲನೆ ನೀಡಿ ವರ್ಷದಲ್ಲೇ ಪೂರ್ಣಗೊಳಿಸುವ ಬಗ್ಗೆ ಸೂಚನೆ ನೀಡಲಾಗುವುದು. ಪೀಠೋಪಕರಣ ಖರೀದಿಗೆ 50 ಶೇ. ಅನುದಾನ ಶಿಕ್ಷಣ ಇಲಾಖೆಯಿಂದ ನೀಡಿ, ಉಳಿದ ಅನುದಾನದ ಬಗ್ಗೆ ಸ್ಥಳೀಯ ಶಾಸಕ ಯು.ಟಿ.ಖಾದರ್ ಬಳಿ ಮಾತುಕತೆ ನಡೆಸುತ್ತೇನೆ. ಸ್ಥಳೀಯ ಪ್ರದೇಶದಲ್ಲಿರುವ ಮೂರು ಕಾಲೇಜಿಗೆ ಲ್ಯಾಬ್ ನಿರ್ಮಾಣಕ್ಕೆ ಬೇಡಿಕೆಯಿದ್ದು ಮಂಗಳೂರು ವಿವಿಯಿಂದ ಸುಸಜ್ಜಿತ ಲ್ಯಾಬ್ ನಿರ್ಮಿಸುವಂತೆ ಕುಲಪತಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರೊ.ಫಾರೂಕ್, ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ ಕಾಜವ, ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಕುರ್ನಾಡ್ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ಬೋಳಿಯಾರ್ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ, ಪದ್ಮನಾಭ ನರಿಂಗಾನ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ, ಸಂತೋಷ್ ಕುಮಾರ್ ಶೆಟ್ಟಿ, ಉಮರ್ ಪಜೀರು ಮೊದಲಾದವರು ಉಪಸ್ಥಿತರಿದ್ದರು.

ಕಾಲೇಜು ಪ್ರಾಂಶುಪಾಲ ಗಿರಿಧರ್ ರಾವ್ ಸ್ವಾಗತಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಚಂದ್ರಹಾಸ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News