ಅಟ್ರಿಂಜೆ ಕೊರಗ ಕುಟುಂಬಗಳ ಮನೆಗಳಿಗೆ ಜಿಲ್ಲಾಧಿಕಾರಿ ಭೇಟಿ

Update: 2016-09-02 13:43 GMT

ಬೆಳ್ತಂಗಡಿ, ಸೆ.2: ಸುಲ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾವರ ಗ್ರಾಮದ ಅಟ್ರಿಂಜೆ ಎಂಬಲ್ಲಿ ಕಾಡಿನಲ್ಲಿ ಟರ್ಪಾಲ್ ಹಾಕಿ ವಾಸಿಸುತ್ತಿರುವ ಐದು ಕೊರಗ ಕುಟುಂಬಗಳ ಮನೆಗಳಿಗೆ ಜಿಲ್ಲಾಧಿಕಾರಿ ಜಗದೀಶ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

‘ವಾರ್ತಾಭಾರತಿ’ಯು ಅಟ್ರಿಂಜೆಯ ಕೊರಗರ ಸಂಕಷ್ಟದ ಬದುಕಿನ ಕತೆಯನ್ನು ವರದಿ ಮಾಡಿತ್ತು. ಇದೀಗ ಈ ಕುಟುಂಬಗಳು ಹೊಸ ಬದುಕಿನ ಆಶಾಭಾವನೆಯಲ್ಲಿದ್ದಾರೆ. ಕೊರಗರ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಅವರ ಸಮಸ್ಯೆಗಳನ್ನು ಆಲಿಸಿದರು. ಜಮೀನು ಇಲ್ಲದ ಕಾರಣಕ್ಕೆ ಇಂತಹ ಪರಿಸ್ಥಿತಿಯಲ್ಲಿ ಬದುಕಬೇಕಾಗಿ ಬಂದಿರುವುದಾಗಿ ಸಂತ್ರಸ್ತರು ವಿವರಿಸಿದರು.

ಯಾವುದೇ ಕಾರಣಕ್ಕೂ ಈ ಕುಟುಂಬಗಳನ್ನು ಇಲ್ಲಿಂದ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನೀವು ಇಲ್ಲಿರುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಆದರೆ, ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಕಷ್ಟಸಾಧ್ಯವಾಗಲಿದೆ. ಸೇತುವೆ ನಿರ್ಮಾಣದಂತಹ ಕಾರ್ಯ ಸುಲಭವಾಗಿ ನಡೆಯಲಾರದು ಎಂದು ವಿವರಿಸಿದರು.

ಸರಕಾರ ನಿಮಗಾಗಿ ಬೇರೆ ಸ್ಥಳವನ್ನು ನಿಗದಿಪಡಿಸಲಿದೆ. ಆ ಸ್ಥಳ ನಿಮಗೆ ವಾಸಕ್ಕೆ ಯೋಗ್ಯ ಎಂದು ಕಾಣಿಸಿದಲ್ಲಿ ಅಲ್ಲಿ ಹೋಗಿ ನೆಲೆಸಬಹುದು. ಪ್ರತಿ ಕುಟುಂಬಕ್ಕೂ ತಲಾ 10 ಸೆಂಟ್ಸ್ ಜಾಗವನ್ನು ಸರಕಾರದ ವತಿಯಿಂದ ಗುರುತಿಸಿ ನೀಡಲಾಗುವುದು. ಮೊದಲಿಗೆ ನಿಮಗೆ ಜಾಗಕ್ಕೆ ಹಕ್ಕುಪತ್ರ, ಮನೆ ನಿರ್ಮಾಣ, ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು. ಬಳಿಕ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ನೀಡಲಾಗುವುದು. ಅಲ್ಲಿ ನೀವು ನಿಮ್ಮ ಕುಲಕಸುಬುಗಳನ್ನು ಮಾಡಿಕೊಂಡು, ಆಡು, ಕೋಳಿ, ಹೈನುಗಾರಿಕೆ ಮಾಡಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊರಗ ಕುಟುಂಬದ ಹರೀಶ್ ಹಾಗೂ ಅಣ್ಣು ಎಂಬವರು ತನಗೆ ಕೃಷಿ ಮಾಡಲು ಜಾಗವನ್ನು ನೀಡುವಂತೆ ವಿನಂತಿಸಿದರು. ಆದರೆ, ಅದಕ್ಕೆ ಜಿಲ್ಲಾಧಿಕಾರಿಗಳು ಕೃಷಿಗೆ ಬೇಕಾದಷ್ಟು ಜಾಗವನ್ನು ನೀಡಲು ಈಗ ಸಾಧ್ಯವಾಗುವುದಿಲ್ಲ. ಮೊದಲಿಗೆ ನೀವು ಆ ಜಾಗದ ಸಾಮಾನ್ಯ ನಿವಾಸಿ ಎಂಬುದು ಆಗಬೇಕು. ಬಳಿಕ ನಿಮಗೆ ಅಲ್ಲಿ ಹೆಚ್ಚುವರಿ ಜಾಗವನ್ನು ನೀಡಲು ಸಾಧ್ಯವಿದೆ. ಅಲ್ಲದೆ, ನಿಮಗೆ ಬೇರೆ ಯಾವುದೇ ರೀತಿಯ ಉದ್ಯೋಗ ಮಾಡುವುದಕ್ಕಾಗಿ ತರಬೇತಿಯನ್ನು ನೀಡಲು ಜಿಲ್ಲಾಡಳಿತದ ವತಿಯಿಂದ ವ್ಯವಸ್ಥೆ ಮಾಡಲಾಗುವುದು ಎಂದರು.

ಆದರೆ, ನೀವು ಈಗ ಇರುವ ಜಾಗದಲ್ಲೇ ಇರುವುದಾಗಿ ತಿಳಿಸಿದರೆ ನಿಮಗೆ ಇಲ್ಲಿಯೇ ಉಳಿಯಲು ವ್ಯವಸ್ಥೆ ಮಾಡಲಾಗುವುದು. ಮನೆಗೆ ಯಾರೂ ಒತ್ತಾಯ ಮಾಡುವುದಿಲ್ಲ. ಆದರೆ, ಇಲ್ಲಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಕಷ್ಟವಾಗಬಹುದು ಎಂದ ಅವರು, ಅವರ ಇಚ್ಛೆಗೆ ವಿರುದ್ಧವಾಗಿ ಯಾವುದೇ ರೀತಿಯ ತೊಂದರೆ ನೀಡುವುದಾಗಿ, ತೆರೆವುಗೊಳಿಸುವುದಾಗಲೀ ಮಾಡದಂತೆ ತಹಶೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ಜಿಲ್ಲಾಧಿಕಾರಿ ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿರುವ, ಹಾಗೂ ಇತರೆ ಉದ್ದೇಶಗಳಿಗೆ ಮೀಸಲಿರಿಸಲಾಗಿರುವ ಜಮೀನನ್ನು ಪರಿಶೀಲನೆ ನಡೆಸಿದರು. ಇಲ್ಲಿ ಸುಮಾರು 600 ಎಕರೆ ಜಮೀನಿದ್ದು ಇದರಲ್ಲಿ 120 ಎಕರೆ ಜಮೀನು ಆದಿವಾಸಿಗಳ ಪುನರ್ವಸತಿಗೆಂದು ಮೀಸಲಿರಿಸಲಾಗಿದೆ. ಅಲ್ಲದೆ 46 ಎಕರೆ ಜಮೀನು ತಾಲೂಕು ಪಂಚಾಯತ್‌ಗೆ ಮನೆ ನಿವೇಶನಕ್ಕೆಂದು ಮೀಸಲಿರಿಸಲಾಗಿದೆ. ಆದರೆ, ಇನ್ನೂ ಜಮೀನನ್ನು ಅಳತೆ ಮಾಡಿ ಗಡಿಗುರುತು ಮಾಡುವ ಕಾರ್ಯ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಗಮನ ಹರಿಸಿ ಹದಿನೈದು ದಿನಗಳ ಒಳಗೆ ಸರ್ವೇಕಾರ್ಯ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದರು. ಇಲ್ಲಿ ಇದೀಗ ಹೊಸದಾಗಿ ನಡೆದಿರುವ ಅಕ್ರಮಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಇಂತಹ ಅಕ್ರಮಗಳನ್ನು ತೆರವುಗೊಳಿಸಲಾಗುವುದು. ಇಲ್ಲಿನ ಮೂಲ ನಿವಾಸಿಗಳಿಗೆ ತಲಾ 9 ಸೆಂಟ್ಸ್‌ನಂತೆ ಮನೆ ನಿವೇಶನಗಳನ್ನು ನೀಡಲಾಗುವುದು. ಎರಡು ಎಕರೆಯಂತೆ ಜಮೀನು ನೀಡಲು ಸಾಧ್ಯವಿಲ್ಲ ಎಂದು ಅಲ್ಲಿ ಜಮೀನು ಅಕ್ರಮ ಮಾಡಿಕೊಂಡಿರುವವರಿಗೆ ಸೂಚನೆ ನೀಡಿದರು. ಹಾಗೂ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖಾಧಿಕಾರಿಗಳಿಗೂ ಸೂಚಿಸಿದರು.

ಈ ಸಂದರ್ಭ ಪುತ್ತೂರು ಸಹಾಯಕ ಕಮಿಷನರ್ ಡಾ. ರಾಜೇಂದ್ರ, ತಹಶೀಲ್ದಾರ್ ತಿಪ್ಪೇಸ್ವಾಮಿ, ಕಂದಾಯ ನಿರೀಕ್ಷಕ ದೊಡ್ಡಮನಿ, ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೋಪಾಲ್, ಡಿಡಿಎಲ್‌ಆರ್ ಶ್ರೀನಿವಾಸ್, ಸಮಾಜ ಕಲ್ಯಾಣಾಧಿಕಾರಿ ಮೋಹನ್, ಐಟಿಡಿಪಿ ಸಮನ್ವಯಾಧಿಕಾರಿ ಹೇಮಲತಾ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News