ಬಿ.ಸಿ.ರೋಡ್‌ನಲ್ಲಿ ಭಾರತ್ ಬಂದ್ ಭಾಗಶಃ ಯಶಸ್ವಿ

Update: 2016-09-02 14:10 GMT

ಬಂಟ್ವಾಳ, ಆ. 2: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಾರತ್ ಬಂದ್ ಬಂಟ್ವಾಳ ತಾಲೂಕು ಕೇಂದ್ರವಾದ ಬಿ.ಸಿ.ರೋಡ್‌ನಲ್ಲಿ ಭಾಗಶಃ ಯಶಸ್ವಿಯಾಗಿದೆ.

ಶುಕ್ರವಾರ ಬೆಳಗ್ಗಿನ ಕೆಲ ಹೊತ್ತುಗಳ ಕಾಲ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚಾರ ನಡೆಸಿದರೆ ಜನಸಂಚಾರ ವಿರಳವಾಗಿದ್ದರಿಂದ ಬಳಿಕ ಸಂಚಾರವನ್ನು ಸ್ಥಗಿತಗೊಳಿಸಿದರೆ ಸಂಜೆ 5 ಗಂಟೆಯ ಬಳಿಕ ಪುನರಾರಂಭಗೊಂಡಿತು. ಮೂಡುಬಿದಿರೆ, ಕಾರ್ಕಳ, ವೇಣೂರು, ಮುಡಿಪು ಕಡೆಯಿಂದ ಬಿಸಿರೋಡ್‌ಗೆ ಆಗಮಿಸುವ ಖಾಸಗಿ, ಸರ್ವಿಸ್ ಬಸ್‌ಗಳು ಸಂಪೂರ್ಣ ಬಂದ್ ಆಗಿತ್ತು. ಪುತ್ತೂರು, ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಸರಕಾರಿ ಬಸ್‌ಗಳು ಸಂಚಾರ ಆರಂಭಿಸಿದವಾದರೂ ಮಂಗಳೂರಿನಲ್ಲಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದರಿಂದ ಬಸ್ ಸಂಚಾರಕ್ಕೆ ಪ್ರತಿರೋಧ ಉಂಟಾಗಬಹುದೆಂಬ ಆತಂಕದ ಹಿನ್ನಲೆಯಲ್ಲಿ ಬಸ್‌ಗಳು ಬಿ.ಸಿ.ರೋಡ್‌ವರೆಗೆ ಮಾತ್ರ ಸಂಚಾರ ಬೆಳೆಸಿದವು.

ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಶಾಲಾ ವಾಹನಗಳು ಸಂಪೂರ್ಣವಾಗಿ ತಟಸ್ಥವಾಗಿತ್ತು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿರದೆ ವಿರಳವಾಗಿತ್ತು. ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತದ ಹಿನ್ನೆಲೆಯಲ್ಲಿ ಸದಾ ಜನಜಂಗುಳಿ ಹಾಗೂ ವಾಹನಗಳಿಂದ ಗಿಜಿಗೂಡುತ್ತಿದ್ದ ಬಿ.ಸಿ.ರೋಡು ಬಸ್ ತಂಗುದಾಣ ಬಿಕೋ ಎನಿಸುತ್ತಿತ್ತು. ಬಿ.ಸಿ.ರೋಡಿನಲ್ಲಿರುವ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ಕೆಲವು ಅಂಗಡಿ ಮುಂಗಟ್ಟುಗಳು ತೆರೆದಿದ್ದರೂ ಜನರಿಲ್ಲದೆ ಕಾರ್ಯಚಟುವಟಿಕೆ ನೀರಸವಾಗಿತ್ತು.

ಉಳಿದಂತೆ ತಾಲೂಕಿನ ಬಂಟ್ವಾಳ ಪೇಟೆ, ಕಲ್ಲಡ್ಕ, ಮೆಲ್ಕಾರ್, ಪಾಣೆಮಂಗಳೂರು, ಫರಂಗಿಪೇಟೆ, ತುಂಬೆ ಮೊದಲಾದ ಕಡೆಗಳಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಾಲೂಕಿನ ಗ್ರಾಮೀಣ ಭಾಗವಾದ ವಾಮದಪದವು, ಸರಪಾಡಿ, ಕಕ್ಯಪದವು, ಬಿಯಪಾದೆ, ಕೂರಿಯಾಳ ಸಹಿತ ಮಂಗಳೂರಿನಿಂದ ಧರ್ಮಸ್ಥಳ ಮಧ್ಯೆ ಸಂಚರಿಸುವ ನಿತ್ಯ ಪ್ರಯಾಣಿಕರು ಮುಷ್ಕರದಿಂದ ತೊಂದರೆಗೊಳಗಾದರು. 

ವಿಟ್ಲದಲ್ಲಿ ಯಶಸ್ವಿ ಬಂದ್

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ವಿಟ್ಲದಲ್ಲಿ ಯಶಸ್ವಿಯಾಯಿತು. ಔಷಧಿ, ಹಾಲು ಅಂಗಡಿಗಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಾಗಿಲು ಮುಚ್ಚಿದ್ದವು. ಕಾರ್ಮಿಕ ವರ್ಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಟ್ಲ ಖಾಸಗಿ ಬಸ್ ನಿಲ್ದಾಣದಲ್ಲಿ ವಿಟ್ಲದ ವಿವಿಧ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಫೆಡರೇಶನ್ ಆಫ್ ಕರ್ನಾಟಕ ಆಟೊರಿಕ್ಷಾ ಯೂನಿಯನ್, ಬಿಎಸ್ಸೆನ್ನೆಲ್, ಮೆಸ್ಕಾಂ ಕಾರ್ಮಿಕ ಸಂಘಟನೆ, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾಕಾರರನ್ನುದ್ದೇಶಿಸಿ ಸಿಐಟಿಯು ಮುಖಂಡ ರಾಮಣ್ಣ ವಿಟ್ಲ ಮಾತನಾಡಿದರು.

ವಿಟ್ಲ ಫೆಡರೇಶನ್ ಆಫ್ ಕರ್ನಾಟಕ ಆಟೊರಿಕ್ಷಾ ಯೂನಿಯನ್‌ನ ಅಧ್ಯಕ್ಷ ವಸಂತ, ಶಿವಪ್ಪನಾಯ್ಕ, ಆಟೊರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಬ್ರಾಹೀಂ ಬಿ., ದಲಿತ್ ಸೇವಾ ಸಮಿತಿಯ ಚಂದ್ರಶೇಖರ, ಮೋಹನ್‌ದಾಸ, ಬಿಎಸ್ಸೆನ್ನೆಲ್ ಕಾರ್ಮಿಕ ಸಂಘಟನೆಯ ಚಂದ್ರಹಾಸ, ವಿಜಯಕುಮಾರ್, ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ತುಳಸೀದಾಸ್ ವಿಟ್ಲ, ಸಲೀಂ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ತಾಲೂಕಿನಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್., ನಗರ ಠಾಣೆ ಎಸ್ಸೈ ನಂದಕುಮಾರ್, ಗ್ರಾಮಾಂತರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ, ವಿಟ್ಲ ಠಾಣೆ ಎಸ್ಸೈ ಪ್ರಕಾಶ್ ದೇವಾಡಿಗ ಭಸದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News