ಸಾರ್ವತ್ರಿಕ ಮುಷ್ಕರ: ಉಡುಪಿಯಲ್ಲಿ ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ

Update: 2016-09-02 14:33 GMT

ಉಡುಪಿ, ಸೆ.2: ದೇಶವ್ಯಾಪಿ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಯುಸಿ) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಇಂದು ಉಡುಪಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.

ಬೆಳಗ್ಗೆ ಅಜ್ಜರಕಾಡಿನಲ್ಲಿರುವ ಎಲ್‌ಐಸಿ ಕಚೇರಿ ಬಳಿಯಿಂದ ಹೊರಟ ಕಾರ್ಮಿಕರು, ಬ್ಯಾಂಕ್, ಬಿಎಸ್ಸೆನ್ನೆಲ್, ವಿಮಾ ನೌಕರರು, ಸಿಟಿ ಬಸ್ ನೌಕರರು, ಕಟ್ಟಡ ಕಾರ್ಮಿಕರ ಮೆರವಣಿಗೆಯು ಜೋಡುಕಟ್ಟೆ, ಕೋರ್ಟ್ ರಸ್ತೆ, ಕೆ.ಎಂ.ಮಾರ್ಗ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಕಾರ್ಪೊರೇಶನ್ ಬ್ಯಾಂಕ್ ಎದುರು ಸಮಾಪನಗೊಂಡಿತು.

ಬಳಿಕ ಬ್ಯಾಂಕ್ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ದ.ಕ. ಜಿಲ್ಲಾ ಮುಖಂಡ ಸುರೇಶ್ ಕುಮಾರ್, ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ನೀಡಿದ ಆಶ್ವಾಸನೆಗೆ ಇಂದು ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ದುಡಿಯುವ ವರ್ಗಗಳ ಬೇಡಿಕೆ ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಅಧಿಕಾರದ ಅವಧಿಯಲ್ಲಿ ಅತ್ಯಧಿಕ ದಿನವನ್ನು ವಿದೇಶದಲ್ಲೇ ಕಳೆಯುತ್ತಿದ್ದಾರೆ. ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಾಡಲು ಹೊರಟಿರುವ ಸರಕಾರ ಇಲ್ಲಿನ ವ್ಯಾಪಾರಸ್ಥರನ್ನು ಬೀದಿಪಾಲು ಮಾಡಲಿದೆ. ರಸ್ತೆ ಸುರಕ್ಷಾ ಮಸೂದೆ ವಾಹನ ಚಾಲಕರಿಗೆ ಮಾರಕವಾಗಲಿದೆ. ಬೀಡಿ ಕಾರ್ಮಿಕರನ್ನು ಸರ್ವನಾಶ ಮಾಡಲು ಸರಕಾರ ಹೊರಟಿದೆ ಎಂದು ಅವರು ಆರೋಪಿಸಿದರು.

ಸಿಐಟಿಯು ಜಿಲ್ಲಾ ಮುಖಂಡ ಪಿ.ವಿಶ್ವನಾಥ ರೈ, ಎಐಬಿಇಎ ಮುಖಂಡ ಹೆರಾಲ್ಡ್ ಡಿಸೋಜ, ಬಿಇಎಫ್‌ಐನ ರವೀಂದ್ರ, ಬಿಎಸ್ಸೆನ್ನೆಲ್ ನೌಕರರ ಸಂಘದ ಶಶಿಧರ ಗೊಲ್ಲ, ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಯು.ಗುರುದತ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ, ಎಐಟಿಯುಸಿನ ಕೆ.ವಿ.ಭಟ್, ಜಿಲ್ಲಾ ಸಿಟಿ ಬಸ್ ನೌಕರರ ಸಂಘದ ಉಪಾಧ್ಯಕ್ಷ ಸಂತೋಷ್, ಕಟ್ಟಡ ಕಾರ್ಮಿಕ ಸಂಘದ ಶೇಖರ್ ಬಂಗೇರ, ಗಣೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಾವರದಲ್ಲಿ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News