×
Ad

ಕುಂದಾಪುರ, ಬೈಂದೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ರಾಷ್ಟ್ರೀಯ ಹೆದ್ದಾರಿ ತಡೆ

Update: 2016-09-02 20:14 IST

ಕುಂದಾಪುರ, ಸೆ.2: ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ವಿವಿಧ ಕಾರ್ಮಿಕ ಸಂಘಟನೆಗಳು ಶುಕ್ರವಾರ ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದವು.

ಶಾಸ್ತ್ರಿ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕುಂದಾಪುರ ಪೇಟೆಯ ಪ್ರಮುಖ ಮಾರ್ಗಗಳಲ್ಲಿ ಸಾಗಿ ಬಳಿಕ ಶಾಸ್ತ್ರಿ ಸರ್ಕಲ್‌ಗೆ ಆಗಮಿಸಿತು. ಅಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 15 ನಿಮಿಷ ಗಳ ಕಾಲ ರಸ್ತೆ ತಡೆ ನಡೆಸಿದ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಬಳಿಕ ಅಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್.ನರಸಿಂಹ, ಮುಖಂಡ ಕೆ.ಶಂಕರ್, ಇಂಟಕ್ ತಾಲೂಕು ಅಧ್ಯಕ್ಷ ಲಕ್ಷ್ಮಣ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಸುರೇಶ್ ಕಲ್ಲಾಗರ್, ಉದಯ ಪೂಜಾರಿ, ಮಹಾಬಲ ವಡೇರಹೋಬಳಿ, ಲಕ್ಷ್ಮಣ್ ಬರೆಕಟ್ಟು, ರಮೇಶ್, ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರಿನಲ್ಲಿ ರಸ್ತೆತಡೆ: ಬೈಂದೂರಿನ ಯಡ್ತರೆಯಿಂದ ಆರಂಭಗೊಂಡ ಸಿಐಟಿಯು, ಅಕ್ಷರದಾಸೋಹ ಮತ್ತು ಆಶಾಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆಯು ಬೈಂದೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.ಬಳಿಕ ಪ್ರತಿಭಟನಕಾರರು ಬೈಂದೂರು ಜಂಕ್ಷನ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 15 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಿಐಟಿಯು ಮುಖಂಡರಾದ ವೆಂಕಟೇಶ್ ಕೋಣಿ, ಗಣೇಶ್ ತೊಂಡೆಮಕ್ಕಿ, ಗಣೇಶ್ ಮೊಗವೀರ, ಮಾಧವ ಉಪ್ಪುಂದ, ಶ್ರೀಧರ್ ಉಪ್ಪುಂದ, ಜಯಶ್ರೀ ಪಡುವರಿ, ರೋನಿ ನಜರತ್ ಮೊದಲಾದವರು ಉಪಸ್ಥಿತರಿದ್ದರು.

ಅದೇ ರೀತಿ ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಗಂಗೊಳ್ಳಿಯಿಂದ ತ್ರಾಸಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News