ಹಾಜಿ ಅಬ್ದುಲ್ಲಾ ದಾನ ಮಾಡಿರುವ ಸರಕಾರಿ ಆಸ್ಪತ್ರೆಯ ಖಾಸಗೀಕರಣದ ವಿರುದ್ಧ ಹೋರಾಟಕ್ಕೆ ಮುಸ್ಲಿಮ್ ಒಕ್ಕೂಟ ನಿರ್ಧಾರ

Update: 2016-09-02 16:03 GMT

ಉಡುಪಿ, ಸೆ.2: ಹಾಜಿ ಅಬ್ದುಲ್ಲಾ ದಾನ ಮಾಡಿರುವ ಜಾಗದಲ್ಲಿರುವ ನಗರದ ಕೆ.ಎಂ.ರಸ್ತೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ದುಬೈಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ವಹಿಸಿಕೊಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಇದರ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದೆ.

ಒಕ್ಕೂಟದ ನೇತೃತ್ವದಲ್ಲಿ ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ನಡೆದ ಸಭೆಯಲ್ಲಿ ವಿವಿಧ ಮುಸ್ಲಿಮ್ ಸಂಘಟನೆಗಳ ಪದಾಧಿಕಾರಿಗಳು ಈ ಕುರಿತು ನಿರ್ಣಯ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಈ ಆಸ್ಪತ್ರೆ ಯನ್ನು ಖಾಸಗಿಯವರಿಗೆ ನೀಡಬಾರದು. ಈ ಕುರಿತು ಸರಕಾರದ ಮೇಲೆ ಒತ್ತಡ ಹಾಕಬೇಕು. ಸರಕಾರ ಇದಕ್ಕೆ ಒಪ್ಪದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಸಭೆಯಲ್ಲಿ ತೀರ್ಮಾನಿಸಿದರು.

ಇದಕ್ಕಾಗಿ 10 ಮಂದಿ ಪ್ರಮುಖರ ಸಮಿತಿಯೊಂದನ್ನು ರಚಿಸಲಾಯಿತು. ಮುಂದೆ ಈ ಸಮಿತಿಯ ತೀರ್ಮಾನದಂತೆ ಹೋರಾಟದ ರೂಪುರೇಷೆಗಳನ್ನು ಹಾಕಿ ಕೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ ಈ ಕುರಿತು ಹೋರಾಟ ನಡೆಸುವ ಸಮಾನ ಮನಸ್ಕ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸುವ ಕುರಿತೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ವಕ್ಫ್ ಬೋರ್ಡಿನ ಜಿಲ್ಲಾ ಸಲಹಾ ಮಂಡಳಿಯ ಅಧ್ಯಕ್ಷ ಯಹ್ಯಾ ನಕ್ವಾ, ಮಸೀದಿಯ ಅಧ್ಯಕ್ಷ ಮುಹಮ್ಮದ್ ಯಾಸೀನ್, ಪ್ರಧಾನ ಕಾರ್ಯದರ್ಶಿ ಖಲೀಲ್ ಅಹ್ಮದ್, ಒಕ್ಕೂಟದ ಕಾರ್ಯದರ್ಶಿ ಖಾಸಿಂ ಬಾರಕೂರು, ಪ್ರಮುಖರಾದ ಖತೀಬ್ ರಶೀದ್, ಹುಸೇನ್ ಕೋಡಿಬೆಂಗ್ರೆ, ಮುಸ್ಲಿಮ್ ವೆಲ್ಫೇರ್‌ನ ಅಧ್ಯಕ್ಷ ಗಫೂರ್ ಕಲ್ಯಾಣಪುರ, ಮುಹಮ್ಮದ್ ವೌಲಾ, ಅಬ್ದುಲ್ ಅಝೀಝ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News