ನ್ಯೂಯಾರ್ಕ್ : ಹಿಜಾಬ್ ದಾರಿ ಮುಸ್ಲಿಂ ವೃದ್ಧೆಯ ಬರ್ಬರ ಕೊಲೆ

Update: 2016-09-02 18:17 GMT

ನ್ಯೂಯಾರ್ಕ್, ಸೆ. 2: ಶಂಕಿತ ಜನಾಂಗೀಯ ದ್ವೇಷ ಪ್ರಕರಣವೊಂದರಲ್ಲಿ, ಶಿರವಸ್ತ್ರ ಧರಿಸಿದ 60 ವರ್ಷ ಪ್ರಾಯದ ಮುಸ್ಲಿಮ್ ಮಹಿಳೆಯೊಬ್ಬರನ್ನು ನ್ಯೂಯಾರ್ಕ್‌ನಲ್ಲಿ ಅಜ್ಞಾತ ದುಷ್ಕರ್ಮಿಗಳು ಬುಧವಾರ ಇರಿದು ಕೊಂದಿದ್ದಾರೆ.
 ನಿವೃತ್ತ ಶಿಕ್ಷಕಿ ನಝ್ಮ ಖಾನಮ್ ತನ್ನ ಗಂಡ ಶಂಸುಲ್ ಅಲಮ್ ಖಾನ್ ಜೊತೆಗೆ ತಮ್ಮ ಅಂಗಡಿಯನ್ನು ಮುಚ್ಚಿ ಮನೆ ಕಡೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ತಮ್ಮ ಮನೆಯಿಂದ ಸ್ವಲ್ವವೇ ದೂರದಲ್ಲಿದ್ದಾಗ ರಾತ್ರಿ ಸುಮಾರು 9.15ಕ್ಕೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎಂದು ‘ನ್ಯೂಯಾರ್ಕ್ ಡೇಲಿ ನ್ಯೂಸ್’ ವರದಿ ಮಾಡಿದೆ.
45 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ನಝ್ಮ ಮತ್ತು ಶಂಸುಲ್ ಮೂವರು ಮಕ್ಕಳನ್ನು ಹೊಂದಿದ್ದಾರೆ. ದಂಪತಿ ತಮ್ಮ ಕಿರಿಯ ಪುತ್ರನೊಂದಿಗೆ 2009ರಲ್ಲಿ ಬಾಂಗ್ಲಾದೇಶದಿಂದ ಅಮೆರಿಕಕ್ಕೆ ತೆರಳಿದ್ದರು. ಅವರು ಈ ವರ್ಷದ ಜೂನ್‌ನಲ್ಲಿ ಅಮೆರಿಕದ ನಾಗರಿಕರಾಗಿದ್ದಾರೆ.
ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಲ್ಲಿ ಅವರು ಕೊನೆಯುಸಿರೆಳೆದರು.
‘‘ನನ್ನ ಹೆಂಡತಿ ಸಾಯುವುದಕ್ಕಾಗಿ ಈ ದೇಶಕ್ಕೆ ಬಂದಳು. ಬಾಂಗ್ಲಾದೇಶದಲ್ಲಿ ನಾವು ಉತ್ತಮ ಬದುಕನ್ನು ಹೊಂದಿದ್ದೆವು’’ ಎಂದು ಶಂಸುಲ್ ಅಲಂ ಹೇಳಿರುವುದಾಗಿ ಅವರ ಅಳಿಯ ಹುಮಾಯೂನ್ ಕಬೀರ್ ಹೇಳಿದರು.
‘‘ಇದೊಂದು ಜನಾಂಗೀಯ ದ್ವೇಷದ ಕೃತ್ಯ. ಅವರು ಆಕೆಯ ಫೋನಾಗಲಿ, ಪಾಕೆಟ್‌ಬುಕ್ ಆಗಲಿ, ಬ್ಯಾಗ್ ಆಗಲಿ ಏನನ್ನೂ ಕೊಂಡೋಗಿಲ್ಲ. ನಮಗೆ ನ್ಯಾಯ ಬೇಕು’’ ಎಂದು ಸಂಬಂಧಿಯೊಬ್ಬರು ಹೇಳುತ್ತಾರೆ.
ಎರಡು ವಾರಗಳ ಹಿಂದೆ ನ್ಯೂಯಾರ್ಕ್‌ನ ಮಸೀದಿಯೊಂದರಲ್ಲಿ 55 ವರ್ಷದ ಬಾಂಗ್ಲಾದೇಶಿ-ಅಮೆರಿಕನ್ ಇಮಾಮ್ ಮತ್ತು ಅವರ ಸಹಾಯಕರೊಬ್ಬರನ್ನು ಹಾಡಹಗಲಲ್ಲೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಕೊಂದಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News