ಆರೆಸ್ಸೆಸ್ ಅನ್ನೇ ಅಲ್ಲಾಡಿಸಿದ ಅಮಿತ್ ಶಾ ಸರ್ವಾಧಿಕಾರ !

Update: 2016-09-03 08:14 GMT

ಗೋವಾ, ಸೆ.3: ತನ್ನ ಗೋವಾ ಘಟಕದ ಮುಖ್ಯಸ್ಥ ಸುಭಾಶ್ ವೆಲಿಂಗ್ ಕರ್ ಅವರನ್ನು ಕಿತ್ತೊಗೆಯುವ ಆರೆಸ್ಸೆಸ್ ನಿರ್ಧಾರದ ಬಗ್ಗೆ ಸಂಘದಲ್ಲಿ ಒಮ್ಮತವಿಲ್ಲವೆಂಬುದು ಸ್ಪಷ್ಟವಾಗುತ್ತಿದೆ. ಸುಭಾಶ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಒತ್ತಡದಮೇರೆಗೆ ಹುದ್ದೆಯಿಂದ ಕೆಳಗಿಳಿಸಲಾಗಿದೆಯೆಂದು ಹಲವಾರು ಹಿರಿಯ ಆರೆಸ್ಸೆಸ್ ನಾಯಕರು ಅಭಿಪ್ರಾಯ ಪಡುತ್ತಾರೆ ಎಂದು ಸ್ಕ್ರೋಲ್.ಇನ್ ವರದಿಯೊಂದು ಹೇಳಿದೆ.

ಸುಭಾಶ್ ರಚಿಸಿರುವ ಭಾರತೀಯ ಭಾಷಾ ಸುರಕ್ಷಾ ಮಂಚ್ ಗೋವಾದ ಬಿಜೆಪಿ ಸರಕಾರಕ್ಕೆ ನಿರಂತರವಾಗಿ ಸವಾಲೊಡ್ಡುತ್ತಿದ್ದು, ಅಲ್ಲಿನ ಶಾಲೆಗಳಲ್ಲಿ ಕೊಂಕಣಿ ಮತ್ತು ಮರಾಠಿಯನ್ನು ಕಲಿಕಾ ಮಾಧ್ಯಮವಾಗಿಸಬೇಕೆಂಬ ಸುರಕ್ಷಾ ಮಂಚ್ ಬೇಡಿಕೆ ಸರಕಾರಕ್ಕೆ ಸರಿ ಕಂಡಿಲ್ಲವೆನ್ನುವುದು ಈಗಾಗಲೆ ತಿಳಿದಿರುವ ವಿಚಾರವಾಗಿದೆ.

ಮೇಲಾಗಿ ಅಮಿತ್ ಶಾ ಅವರು ಗೋವಾಗೆ ಆಗಸ್ಟ್ 21ರಂದು ಭೇಟಿ ನೀಡಿದಾಗ ಸಂಘ ಪರಿವಾರ ಕಾರ್ಯಕರ್ತರೂ ಸೇರಿದಂತೆ ಸುರಕ್ಷಾ ಮಂಚ್ ಕಾರ್ಯಕರ್ತರು ಅವರಿಗೆ ಕರಿ ಪತಾಕೆ ತೋರಿಸಿದ ಘಟನೆಯಿಂದ ಶಾ ಆಕ್ರೋಶಗೊಂಡಿದ್ದೇ ಸುಭಾಶ್ ವಿರುದ್ಧ ಕ್ರಮಕ್ಕೆ ಕಾರಣವೆಂದು ತಿಳಿಯಲಾಗಿದೆ.
ಸುಭಾಶ್ ಅವರು ತಮ್ಮ ವಿರುದ್ಧದ ಕ್ರಮಕ್ಕೆಕೇಂದ್ರ ಸಚಿವರಾದ ಮನೋಹರ್ ಪಾರಿಕ್ಕರ್ ಹಾಗೂ ನಿತಿನ್ ಗಡ್ಕರಿಯವರನ್ನು ದೂರಿದ್ದರೆ, ಆರೆಸ್ಸೆಸ್ ನ ಹಲವಾರು ನಾಯಕರ ಪ್ರಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾಆರೆಸ್ಸೆಸ್ ನಾಯಕತ್ವದ ಮೇಲೆ ಹೇರಿದ ಒತ್ತಡವೇ ಈ ಕ್ರಮಕ್ಕೆ ಕಾರಣ.
‘‘ಅಮಿತ್ ಶಾ ಬಿಜೆಪಿಯ ಸರ್ವಾಧಿಕಾರಿಯಾಗಿರಬಹುದು ಆದರೆ ಅವರು ಸಂಘದ ಮೇಲೆ ಸವಾರಿ ಮಾಡುವುದನ್ನು ಅನುಮತಿಸಲಾಗುವುದಿಲ್ಲ’’ ಎಂದು ರಾಜಸ್ಥಾನದ ಹಿರಿಯ ಆರೆಸ್ಸೆಸ್ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಸುಭಾಶ್ ಅವರನ್ನು ಆರೆಸ್ಸೆಸ್ ಗೋವಾ ಘಟಕದ ಮುಖ್ಯಸ್ಥ ಹುದ್ದೆಯಿಂದ ಕಿತ್ತೊಗೆದಿರುವುದು ಸಂಘದ ಕಾರ್ಯಚಟುವಟಿಕೆಗಳಲ್ಲಿ ಬಿಜೆಪಿಯ ನೇರ ಹಸ್ತಕ್ಷೇಪವಿದೆಯೆಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಗೋವಾದ ಹಲವು ಆರೆಸ್ಸೆಸ್ ಪದಾಧಿಕಾರಿಗಳು ಆರೋಪಿಸುತ್ತಾರೆ.
ಈತನ್ಮಧ್ಯೆ ಗೋವಾದ ಆರೆಸ್ಸೆಸ್ ಘಟಕವು ಸ್ವತಂತ್ರ ಸಂಘಟನೆಯಾಗಿ ಕಾರ್ಯನಿರ್ವಹಿಸುವುದು ಎಂದು ಸುಭಾಶ್ ಹೇಳಿರುವುದು ಆರೆಸ್ಸೆಸ್ ನಾಯಕತ್ವಕ್ಕೆ ಅವರು ಸಡ್ಡು ಹೊಡೆದಿದ್ದಾರೆಂಬುದನ್ನು ಸೂಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News