ಬೆಳ್ತಂಗಡಿ: ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಬೆಳ್ತಂಗಡಿ,ಸೆ.3: ನೇತ್ರಾವತಿ ತಿರುವು ಯೋಜನೆ ವಿರೋಧಿಸಿ ದ.ಕ. ಜಿಲ್ಲಾ ಬಂದ್, ಪ್ರತಿಭಟನೆ ಹಾಗೂ ಮನವಿಗೆ ಸರ್ಕಾರ ಮಾನ್ಯತೆ ನೀಡಿಲ್ಲ. ನೇತ್ರಾವತಿ ತಿರುವು ಯೋಜನೆ ಬಗ್ಗೆ ಜಿಲ್ಲೆಯ ಜನರಿಗೆ ಸರಿಯಾದ ಮಾಹಿತಿ ನೀಡದೆ ಸರ್ಕಾರ ದ್ರೋಹ ಮಾಡುತ್ತಿದೆ ಎಂದು ಪತ್ರಕರ್ತ ನೇತ್ರಾವತಿ ಪರ ಹೋರಾಟಗಾರ ಲಕ್ಷ್ಮೀ ಮಚ್ಚಿನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೆಳ್ತಂಗಡಿಯಲ್ಲಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಮತ್ತು ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎತ್ತಿನ ಹೊಳೆ ಯೋಜನೆಯಿಂದ 24 ಟಿ.ಎಂ.ಸಿ. ನೀರು ದೊರಕುತ್ತದೆ ಎಂದು ಸರ್ಕಾರ ತಪ್ಪು ಮಾಹಿತಿ ನೀಡಿದೆ. ವಿಜ್ಞಾನಿಗಳ ಪ್ರಕಾರ ಅಲ್ಲಿ ಕೇವಲ 0.85 ಟಿ.ಎಂ.ಸಿ. ನೀರು ಮಾತ್ರ ಸಿಗಬಹುದು. ಅಭಿವೃದ್ದಿಯ ಹೆಸರಿನಲ್ಲಿ ಪ್ರಕೃತಿ-ಪರಿಸರಕ್ಕೆ ಹಾನಿಯಾಗಿ ಅನೇಕ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಎತ್ತಿನ ಹೊಳೆಯಲ್ಲಿ ನಾಲ್ಕು ಹಳ್ಳಗಳಲ್ಲಿ ಎಂಟು ಅಣೆಕಟ್ಟುಗಳನ್ನು ಕಟ್ಟಿ ನೀರು ಹರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಎತ್ತಿನ ಹೊಳೆ ಹೆಸರಿನಲ್ಲಿ ಪಾಣೆ ಮಂಗಳೂರಿನಲ್ಲಿ ನೀರಿನ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ತಪ್ಪು ವರದಿ ನೀಡಲಾಗಿದೆ. ಯೋಜನೆ ಹೆಸರಿನಲ್ಲಿ ಸರ್ಕಾರ ಜನರನ್ನು ವಂಚಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ವರ್ಷ ಮತ್ತಷ್ಟು ಮಳೆ ಕಡಿಮೆಯಾಗಿದ್ದು ನೀರಿನ ಕೊರತೆ ಇನ್ನೂ ಹೆಚ್ಚಾಗಲಿದೆ. ಜಿಲ್ಲೆಯ ಜನತೆ ಜಾತಿ-ಮತ, ಪಕ್ಷ ಬೇಧ ಮರೆತು ಸಂಘಟಿತ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಪುಷ್ಪರಾಜ ಶೆಟ್ಟಿ ಮಾತನಾಡಿ, ಇಚ್ಛಾ ಶಕ್ತಿಯೊಂದಿಗೆ ನೇತ್ರಾವತಿ ತಿರುವು ಯೋಜನೆ ಅನುಷ್ಠಾನದ ವಿರುದ್ದ ಪ್ರಬಲವಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶುಭಾಶಂಸನೆ ಮಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಆರ್.ಎನ್. ಪೂವಣಿ ಸ್ವಾಗತಿಸಿದರು. ಸಂಘದ ಜತೆ ಕಾರ್ಯದರ್ಶಿ ವಿಲಿಯಂ ಸೋನ್ಸ್ ಧನ್ಯವಾದವಿತ್ತರು. ಕಾರ್ಯದರ್ಶಿ ಪಿ.ಪಿ.ಜೋಯಿ ಕಾರ್ಯಕ್ರಮ ನಿರ್ವಹಿಸಿದರು.