ಸಾಮಾಜಿಕ ಜಾಲತಾಣದಲ್ಲಿ ದೇವರ ಅವಹೇಳನ: ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು,ಸೆ.3: ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು ಮಾಡಿ ತಕ್ಕ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಧರ್ಮ ಜಾಗೃತಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು ಎಚ್ಚರಿಸಿದ್ದಾರೆ. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್‌ಬುಕ್‌ನಲ್ಲಿ ಧಾರ್ಮಿಕ ವಿಚಾರವಾಗಿ ಅವಹೇಳನಕಾರಿಯಾದ ಚಿತ್ರಗಳು ಮತ್ತು ಬರವಣಿಗೆಗಳು ರವಾನೆಯಾಗುತ್ತಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆಯನ್ನುಂಟು ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಟೀಲು ದುರ್ಗಾಪರಮೇಶ್ವರಿ ದೇವಿಯ ಕುರಿತು ಅವಹೇಳನ ಮಾಡಿರುವ ಕುರಿತು ಭಾನುವಾರ ಕಟೀಲಿನಲ್ಲಿ ಜಿಲ್ಲಾಮಟ್ಟದ ಪ್ರಮುಖರ ಸಭೆ ನಡೆಯಲಿದೆ. ಆ ಸಬೆಯಲ್ಲಿ ಕೈಗೊಳ್ಳಲಾಗುವ ತೀರ್ಮಾನದ ಮೇಲೆ ಮುಂದೆ ಪುತ್ತೂರಿನಲ್ಲಿ ಹೋರಾಟ ಪ್ರಾರಂಭವಾಗಲಿದೆ ಎಂದು ಹೇಳಿದರು. ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಈ ಹಿಂದೆಯೂ ಹಿಂದೂ ದೇವತೆಗಳ ಚಿತ್ರಗಳನ್ನು ಕೆಳಮಟ್ಟದಲ್ಲಿ ಚಿತ್ರಿಸಿ ಅವಹೇಳನ ಮಾಡಿರುವ ವಿಚಾರಗಳು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಆ ಸಮಯದಲ್ಲಿಲ್ಲೇ ತಪಿತಸ್ಥತರಿಗೆ ಸರಿಯಾದ ಕಠಿಣ ಶಿಕ್ಷೆ ವಿಧಿಸುತ್ತಿದ್ದರೆ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸುತ್ತಿರಲಿಲ್ಲ. ಪೊಲೀಸ್ ಇಲಾಖೆ ಪಾರದರ್ಶಕವಾಗಿ ತನ್ನ ಕರ್ತವ್ಯವನ್ನು ನಿಭಾಯಿಸಿದಲ್ಲಿ ಇಂತಹ ಪ್ರಕರಣಗಳು ನಡೆಯಲು ಸಾಧ್ಯವಿಲ್ಲ ಎಂದ ಅವರು ಧರ್ಮವನ್ನು ಕೆಣಕುವುದು ಮುಂದೊಂದು ದಿನ ದೊಡ್ಡ ಹೊಡೆತಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಜಾಗೃತಿ ಸಮಿತಿ ಸದಸ್ಯ ರಾಜೇಶ್ ಬನ್ನೂರು, ಬಜರಂಗದಳ ಮಂಗಳೂರು ವಿಭಾಗ ಸುರಕ್ಷಾ ಮಂಡಳಿ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲ್ಲೂಕು ಅಧ್ಯಕ್ಷ ಅಜಿತ್ ರೈ ಹೊಸಮನೆ, ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.