ದಫನ ಭೂಮಿ ಒತ್ತುವರಿ ವಿವಾದ: ಹಲ್ಲೆ ಆರೋಪಿಗಳಿಗೆ ಜಾಮೀನು
ಪುತ್ತೂರು,ಸೆ.3 : ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಪಟ್ಟೆ ಎಂಬಲ್ಲಿನ ದಫನ ಭೂಮಿಯ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದ ತಕರಾರಿನ ಹಿನ್ನಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಅಬ್ದುಲ್‌ಕುಂಞಿ ಎಂಬವರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ನೀಡಿದೆ.
ಮುಂಡೂರು ಗ್ರಾಮದ ಪಟ್ಟೆ ನಿವಾಸಿ ಅದ್ರಾಮ ಬ್ಯಾರಿ ಅವರ ಪುತ್ರರಾದ ಇಬ್ರಾಹಿಂ, ಉಮ್ಮರ್ ಹಾಗೂ ಇಸುಬು ಜಾಮೀನು ಪಡೆದವರು.
ಮುಂಡೂರು ಗ್ರಾಮದ ಪಟ್ಟೆ ಎಂಬಲ್ಲಿರುವ ಸರ್ವೆ ನಂ.115ರಲ್ಲಿ ಎರಡು ಎಕ್ರೆ ಜಾಗವನ್ನು 1996ರಲ್ಲಿ ದಫನ ಭೂಮಿಗೆ ಕಾದಿರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ಗುರುವಾರ ಸರ್ವೆಯರ್, ಕಂದಾಯ ನಿರೀಕ್ಷಕ ಮತ್ತು ಗ್ರಾಮಕರಣಿಕರು ಸ್ಥಳ ಪರಿಶೀಲನೆ ನಡೆಸಿ ಗಡಿಗುರುತು ಮಾಡಲು ಬಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಅಧಿಕಾರಿಗಳ ಮುಂದೆಯೇ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಅಬ್ದುಲ್ ಕುಂಞಿ ಅವರು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.
ಇದೇ ಘಟನೆಗೆ ಸಂಬಂಧಿಸಿ ಮುಂಡೂರು ಪಟ್ಟೆ ನಿವಾಸಿ ಅದ್ರಾಮ ಬ್ಯಾರಿ ಅವರ ಪುತ್ರರಾದ ಇಸುಬು, ಉಮ್ಮರ್, ಹಾಗೂ ಇಬ್ರಾಹಿಂ ಎಂಬವರು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಅಬ್ದುಲ್ ಕುಂಞಿ ಅವರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳು ಇದೀಗ ನ್ಯಾಯಾಲಯಕ್ಕೆ ಶರಣರಾಗಿದ್ದು, ನ್ಯಾಯಾಲಯ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.