×
Ad

ಕುತ್ಪಾಡಿಯಲ್ಲಿ ಬೃಹತ್ ವಿಮಾ ಮೇಳ

Update: 2016-09-03 19:47 IST

 ಉಡುಪಿ, ಸೆ.3: ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ತನ್ನ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಎರಡನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಬೃಹತ್ ವಿಮಾ ಮೇಳವನ್ನು ಸೆ.5ರಂದು ಕುತ್ಪಾಡಿಯ ರಾಮಕೃಷ್ಣ ಸಭಾಭವನದಲ್ಲಿ ಹಮ್ಮಿಕೊಂಡಿದ್ದು, ಇದನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ಟ್ರಸ್ಟ್‌ನ ಪ್ರವರ್ತಕ ಕೆ.ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಟ್ರಸ್ಟ್ ಒಂದು ವರ್ಷದ ಅವಧಿಯಲ್ಲಿ 16,000ಕ್ಕೂ ಅಧಿಕ ‘ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ’ ಹಾಗೂ ‘ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ’ಗಳ ವಿಮಾ ಪಾಲಿಸಿಯನ್ನು ಉಚಿತವಾಗಿ ನೀಡಿದೆ ಎಂದವರು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ವಾರ್ಷಿಕ 12 ರೂ. ಪಾವತಿಸಿದರೆ, ಅಪಘಾತದಿಂದ ಮರಣ ಹೊಂದಿದರೆ ಕುಟುಂಬಕ್ಕೆ 2 ಲಕ್ಷ ರೂ.ಪರಿಹಾರ ಹಾಗೂ ಪ್ರದಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯಲ್ಲಿ ವಾರ್ಷಿಕ 330ರೂ.ಪಾವತಿಸಿದರೆ ಯಾವುದೇ ತೆರನಾದ ಸಾವಿಗೂ 2 ಲಕ್ಷರೂ. ಪರಿಹಾರ ದೊರೆಯಲಿದೆ. ಸುರಕ್ಷಾ ವಿಮಾ ಯೋಜನೆಯ ವಾರ್ಷಿಕ ಕಂತನ್ನು ಪ್ರತಿ ವರ್ಷ ಟ್ರಸ್ಟೇ ಭರಿಸಲಿದ್ದು, ಜೀವನ ಜ್ಯೋತಿಯ ಪ್ರಥಮ ವರ್ಷದ ಕಂತನ್ನು ಟ್ರಸ್ಟ್ ಭರಿಸುವುದು ಎಂದರು.

ಸೆ.5ರ ಸೋಮವಾರ ಸಂಜೆ 4:30ಕ್ಕೆ ನಡೆಯುವ ಸಮ್ಮೇಳನದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ವಿಮಾ ಪಾಲಿಸಿ ವಿತರಿಸುವರು. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ, ಮಟ್ಟಾರು ರತ್ನಾಕರ ಹೆಗ್ಡೆ, ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್ ಮುಂತಾದವರು ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಶಿವಕುಮಾರ್, ಶಶಿಕುಮಾರ್, ಪ್ರಮೋದ್ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News