×
Ad

ಜಸಸಂಪರ್ಕ ಸಭೆಯಲ್ಲಿ ನಾಗರಿಕರಿಲ್ಲ:ಪ್ರಚಾರ ನೀಡದ ಮಾಧ್ಯಮ ಮತ್ತು ಅಧಿಕಾರಿಗಳ ವಿರುದ್ದ ತಾ.ಪಂ. ಅಧ್ಯಕ್ಷೆ ಗರಂ

Update: 2016-09-03 20:23 IST

ಪುತ್ತೂರು,ಸೆ.3: ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಒಬ್ಬನೇ ಒಬ್ಬ ಜನ ಇಲ್ಲದೆ ಪುತ್ತೂರು ಹೋಬಳಿ ಮಟ್ಟದ ‘ಜನ ಸಂಪರ್ಕ’ ಸಭೆ ನಡೆಯಿತು. ಸಾರ್ವಜನಿಕರಿಂದ ಮನವಿ ಸ್ವೀಕರಿಸಲು ಅಧಿಕಾರಿಗಳ ದಂಡೇ ಆಗಮಿಸಿದ್ದರೂ, ಉತ್ತರ ನೀಡಲು ಇಲಾಖಾ ಅಧಿಕಾರಿಗಳು ಸಿದ್ಧರಾಗಿ ಕಾಯುತ್ತಿದ್ದರೂ ಅಹವಾಲು ಸಲ್ಲಿಸಲು ಯಾವುದೇ ನಾಗರಿಕ ಆಗಮಿಸಲಿಲ್ಲ. ನಿಗದಿಪಡಿಸಿದಂತೆ ಜನಸಂಪರ್ಕ ಸಭೆ 10.30ಕ್ಕೆ ಆರಂಭವಾಗಿತ್ತು. ಯಾರೊಬ್ಬರೂ ಆ ಸಂದರ್ಭದಲ್ಲಿ ಬಂದಿರಲಿಲ್ಲ .ಇದರಿಂದಾಗಿ ಜನರಿಗಾಗಿ ಮುಕ್ಕಾಲು ಗಂಟೆ ಕಾದರೂ ಪ್ರಯೋಜನವೇನೂ ಆಗಲಿಲ್ಲ. ಕೊನೆಗೆ 11.15ಕ್ಕೆ ಸಭೆ ಆರಂಭಿಸಲಾಯಿತು. ಆ ವೇಳೆ ಪುತ್ತೂರು ಹೋಬಳಿಗೆ ಸಂಬಂಧಪಡದ ಕಡಬ ಹೋಬಳಿಯ ವ್ಯಕ್ತಿಯೊಬ್ಬರು ಮಾತ್ರ ಸಭೆಯಲ್ಲಿ ಕಾಣಿಸಿಕೊಂಡರು. ಸಭೆ ನಡೆಸಲು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಮತ್ತು ತಹಶೀಲ್ದಾರ್ ಪುಟ್ಟ ಶೆಟ್ಟಿ ಅವರು ವೇದಿಕೆ ಏರಿ ನಡೆಸಿಕೊಡಲು ಮುಂದಾದಾಗ ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಮಂಜುನಾಥ್ ಅವರು ಎದ್ದು ನಿಂತು, ಇದು ಜನಸಂಪರ್ಕ ಸಭೆಯಾದರೂ ಇಲ್ಲಿ ಜನರೇ ಇಲ್ಲ. ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿದ್ದಾರೆ. ಕಾರ್ಯಕ್ರಮ ಸಂಘಟಕರು ಸಭೆಯ ಕುರಿತು ಪ್ರಚಾರ ಮಾಡಿಲ್ಲ. ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಮಗೆ ನಿನ್ನೆಯಷ್ಟೇ ಗೊತ್ತಾಗಿದೆ.ಪಂಚಾಯಿತಿಗಳಿಗಾದರೂ ಮಾಹಿತಿ ನೀಡಿದ್ದೀರಾ .ಹೀಗಾದರೆ ನಾವು ಯಾಕೆ ನಮ್ಮ ಸಮಯವನ್ನು ಸುಮ್ಮನೆ ವ್ಯರ್ಥ ಮಾಡಲು ಬರಬೇಕು ಎಂದು ಪ್ರಶ್ನಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ಮೀನಾಕ್ಷಿ ಮಂಜುನಾಥ್ ಅವರ ಪ್ರಶ್ನೆಗುತ್ತರಿಸಿದ ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಅವರು ಎಲ್ಲ ಕಂದಾಯ ನಿರೀಕ್ಷಕರಿಗೆ, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿಗಳಿಗೆ ಜನ ಸಂಪರ್ಕ ಸಭೆಯ ಕುರಿತು ನೊಟೀಸ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಪತ್ರಿಕೆಗಳಿಗೂ ಪ್ರಕಟಣೆ ಕಳುಹಿಸಲಾಗಿದೆ ಎಂದು ತಿಳಿಸಿ ಪತ್ರಿಕಾ ಪ್ರಕಟಣೆ ನೀಡಿದ್ದಕ್ಕೆ ದಾಖಲೆ ಇದೆ ಎಂದು ತಿಳಿಸಿದರು.

 ಎಲ್ಲ ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದೇವೆ ಎಂದು ಉಪ ತಹಶೀಲ್ದಾರ್ ಶ್ರೀಧರ್ ಕೋಡಿಜಾಲ್ ಹೇಳಿದಾಗ ತಾಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ ಅವರು ಮಾಧ್ಯಮಗಳ ವಿರುದ್ಧವೂ ಗರಂ ಆದರು. ನೀವು ಕೇವಲ ಜಾಹೀರಾತುಗಳನ್ನು ಮಾತ್ರ ಹಾಕುವುದಲ್ಲ. ಜನರ ಒಳಿತಿಗಾಗಿ ಕೊಟ್ಟ ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸಬೇಕು. ಉತ್ತಮ ಪ್ರಚಾರ ಸಿಕ್ಕಿದ್ದರೆ ಜನ ಬರುತ್ತಿದ್ದರು ಎಂದರು. ಅಧಿಕಾರಿಗಳು ಕೂಡ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೆ ಅಲ್ಲಿಂದ ಜನ ಬರುವ ವ್ಯವಸ್ಥೆ ಆಗುತ್ತಿತ್ತು. ನನಗೆ ಕೂಡ ಗೊತ್ತಾಗಿದ್ದು ನಿನ್ನೆ ಮಧ್ಯಾಹ್ನ 2 ಗಂಟೆಗೆ ಎಂದು ಅವರು ತಿಳಿಸಿದರು.

 ಮುಂದಿನ ದಿನಗಳಲ್ಲಿ ಆದರೂ ಒಂದು ವಾರ ಮುಂಚಿತವಾಗಿಯೇ ಮಾಹಿತಿ ನೀಡಿ ನಡೆಸಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸಲಹೆ ನೀಡಿದರು.

   ಪುತ್ತೂರು ಹೋಬಳಿ ಮಟ್ಟದ ಈ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಲು ಹೋಬಳಿ ವ್ಯಾಪ್ತಿಯ ಯಾರೂ ಇಲ್ಲದಿದ್ದ ಕಾರಣ ಕಡಬ ಹೋಬಳಿ ವ್ಯಾಪ್ತಿಯ ಕೊಣಾಜೆ ಗ್ರಾಮದ ಲೋಕಯ್ಯ ಗೌಡ ಎಂಬವರಿಗೆ ಸಮಸ್ಯೆಯನ್ನು ತಿಳಿಸಲೊಂದು ಅವಕಾಶ ಸಿಕ್ಕಿತು. ಅವರು ಎದ್ದು ನಿಂತು ಬಸ್ ಸಮಸ್ಯೆ, ಪುತ್ತಿಗೆ ಶಾಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುತ್ತಿಗೆಯ ಜನರು ಪಡಿತರ ಕೂಪನ್ ಪಡೆಯಲು 7 ಕಿ.ಮೀ. ದೂರದ ಕೊಣಾಜೆಗೆ ಹೋಗಬೇಕು. ನಂತರ ಪಡಿತರ ಸಾಮಾಗ್ರಿ ಪಡೆಯಲು ಶಿರಾಡಿಗೆ ಬರಬೇಕು. ಇದನ್ನು ತಪ್ಪಿಸಿ ಶಿರಾಡಿಯಲ್ಲೇ ಕೂಪನ್ ಕೊಡುವಂತಾಗಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಅಂಗೀಕರಿಸಿ ಕಳುಹಿಸಿ ಕೊಡುವಂತೆ ಕಂದಾಯ ಅಧಿಕಾರಿಗಳು ಸೂಚಿಸಿದರು. ಲೋಕಯ್ಯ ಅವರು ಕಡಬ ಹೋಬಳಿಯವರಾದ ಕಾರಣ ಅವರು ಅಧಿಕೃತವಾಗಿ ಈ ಬಗ್ಗೆ ಮನವಿ ನೀಡಲಿಲ್ಲ.

 ಹಿಂದಿನ ಜನಸಂಪರ್ಕ ಸಭೆಯಲ್ಲಿ ಬಂದ ಅರ್ಜಿಗಳು ಮತ್ತು ಅದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತಾಲೂಕು ಪಂಚಾಯತ್ ಯೋಜನಾಧಿಕಾರಿ ಗಣಪತಿ ಭಟ್ ವೇದಿಕೆಯಲ್ಲಿದ್ದರು.

ತಾಲೂಕು ಪಂಚಾಯತ್ ಸದಸ್ಯರಾದ ಮೀನಾಕ್ಷಿ ಮಂಜುನಾಥ್, ಲಲಿತಾ ಈಶ್ವರ್, ಸುಜಾತ ಆಚಾರ್ಯ, ದಿವ್ಯಾ ಪುರುಷೋತ್ತಮ, ಹರೀಶ್ ಬಿಜತ್ರೆ, ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಉಪ ತಹಸೀಲ್ದಾರ್ ಶ್ರೀಧರ್ ಕೋಡಿಜಾಲ್ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News