ಮಣಿಪಾಲ: ತನುಷಾ ಗೋಸ್ವಾಮಿಗೆ ಜಿಇ ಗ್ಲೋಬಲ್ ಇನ್ನೊವೇಷನ್ ಪ್ರಶಸ್ತಿ
ಮಣಿಪಾಲ, ಸೆ.3: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೂರನೇ ವರ್ಷದ ಇ ಎಂಡ್ ಸಿಯ ವಿದ್ಯಾರ್ಥಿನಿ ತನುಷಾ ಗೋಸ್ವಾಮಿ ಅವರು ಜಿಇ ಗ್ಲೋಬಲ್ ಇನ್ನೊವೇಷನ್ ಸ್ಪರ್ಧೆ ‘ದಿ ಇಂಪಾಸಿಬಲ್ ಮಿಷನ್: ಯುನಿವರ್ಸಿಟಿ ಎಡಿಷನ್’ನಲ್ಲಿ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ.
ಜಗತ್ತಿನ 35 ದೇಶಗಳ 375 ವಿದ್ಯಾಸಂಸ್ಥೆಗಳಿಂದ 575 ಮಂದಿ ಸ್ಪರ್ಧಾಕಣ ದಲ್ಲಿದ್ದರು. ಕಳೆದ ಎಪ್ರಿಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಈಗ ಮೂವರು ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದ್ದು, ತನುಷಾ ಅವರು ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿದ್ದು, ಬೆಂಗಳೂರಿನಲ್ಲಿರುವ ಜಿಇ ಸಂಸ್ಥೆಯಲ್ಲಿ ಇಂಟರ್ಶಿಪ್ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಒಂದು ನುಡಿಗಟ್ಟನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದ್ದು, ಅದರ ಮೂಲಕ ಪ್ರಯೋಗವೊಂದನ್ನು ನಡೆಸಲು ಜಿಇ ಟೆಕ್ನೋಲಜಿ ತಿಳಿಸಿತ್ತು. ಅದರಂತೆ ತನುಷಾ ಅವರು ಸ್ಪಾನಿಷ್ ಭಾಷೆಯ ನುಡಿಗಟ್ಟು ‘ಮಳೆ ಮೇಲಕ್ಕೆ ಬೀಳಲು ತೊಡಗಿದಾಗ’ನ್ನು ತನ್ನ ಪ್ರಯೋಗಕ್ಕೆ ಬಳಸಿದ್ದು, ಆಯಸ್ಕಾಂತೀಯ ಕ್ಷೇತ್ರವನ್ನು ಬಳಸಿ ನೀರಿನ ಹನಿಗಳು ವಿರುದ್ದ ದಿಕ್ಕಿನಲ್ಲಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿರುವ ಪೇಸ್ ಜಾನ್ ಎಫ್ ವೆಲ್ಚ್ ಟೆಕ್ನಾಲಜಿ ಸೆಂಟರ್‌ನ ಜಾಗತಿಕ ಸಂಶೋಧನಾ ನಿರ್ದೇಶಕ ಹಾಗೂ ಜಿಎಂ ಶುಕ್ಲಚಂದ್ರ ಎಂಐಟಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ತನುಷಾರಿಗೆ ಬಹುಮಾನ ನೀಡಿ ಸನ್ಮಾನಿಸಿದರು. ವಿವಿ ಮಟ್ಟದಲ್ಲಿ ಈ ಸ್ಪರ್ಧೆಯನ್ನು ಸಂಸ್ಥೆ ಆಯೋಜಿಸುತ್ತಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ತನುಷಾ, ಸ್ಪಾನಿಷ್ ಭಾಷೆಯನ್ನು ನಾನು ಅರಿತಿರುವುದರಿಂದ ಅದರಲ್ಲಿದ್ದ ನುಡಿಗಟ್ಟನ್ನು ನನ್ನ ಪ್ರಯೋಗಕ್ಕೆ ಬಳಸಿದ್ದೆ. ತನ್ನ ವಿಭಾಗ ಮುಖ್ಯಸ್ಥರಾಗಿರುವ ಡಾ.ಸೋಮಶೇಖರ ಭಟ್ ಅವರ ನೆರವನ್ನು ನಾನು ಸ್ಮರಿಸುತ್ತೇನೆ ಎಂದರು. ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಉಪಸ್ಥಿತರಿದ್ದರು.