×
Ad

‘‘ಕೊಲ್ಲುವುದಕ್ಕಿಂತ ಪತ್ನಿಗೆ ವಿಚ್ಛೇದನ ನೀಡುವುದು ಉತ್ತಮ’’

Update: 2016-09-03 23:09 IST

ಹೊಸದಿಲ್ಲಿ,ಸೆ.3: ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡುವುದನ್ನು ಸಮರ್ಥಿಸಿಕೊಂಡಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು,ಮಹಿಳೆಯನ್ನು ಕೊಲ್ಲುವುದಕ್ಕಿಂತ ಆಕೆಗೆ ವಿಚ್ಛೇದನ ನೀಡುವುದು ಉತ್ತಮ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

 ಮುಸ್ಲಿಂ ವೈಯಕ್ತಿಕ ಕಾನೂನಿನ ಉಸ್ತುವಾರಿಯನ್ನು ಹೊಂದಿರುವ ಸರಕಾರೇತರ ಸಂಸ್ಥೆಯಾಗಿರುವ ಮಂಡಳಿಯು,ಗಂಡಂದಿರು ಭಾವನಾತ್ಮಕವಾಗಿ ಹೆಚ್ಚಿನ ದೃಢತೆ ಹೊಂದಿರುವುದರಿಂದ ಮುಸ್ಲಿಂ ಕಾನೂನು ಅವರಿಗೆ ವಿಚ್ಛೇದನದ ಅಧಿಕಾರವನ್ನು ನೀಡಿದೆ ಎಂದೂ ಹೇಳಿದೆ.

ಪುರುಷರಿಗೆ ನಿರ್ಧಾರವನ್ನು ಕೈಗೊಳ್ಳುವ ಹೆಚ್ಚಿನ ಸಾಮರ್ಥ್ಯವಿರುವುದರಿಂದ ಶರಿಯಾ ವಿಚ್ಛೇದನದ ಹಕ್ಕನ್ನು ಅವರಿಗೆ ನೀಡಿದೆ. ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಬಲ್ಲರು ಮತ್ತು ಅವಸರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಂಡಳಿಯು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ.

ಮುಸ್ಲಿಂ ಪುರುಷರು ಮೂರು ಬಾರಿ ತಲಾಖ್ ಹೇಳಿ ತಮ್ಮ ಪತ್ನಿಯರಿಗೆ ವಿಚ್ಛೇದನ ನೀಡುವ ಪದ್ಧತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಪದ್ಧತಿಯು ಮುಸ್ಲಿಂ ಮಹಿಳೆಯರ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದೆ ಎನ್ನುವುದು ಅರ್ಜಿದಾರರ ವಾದವಾಗಿದೆ.

ದಂಪತಿಯ ನಡುವೆ ಸೌಹಾರ್ದದ ಕೊರತೆಯಿಂದಾಗಿ ಇನ್ನು ಮಂದೆ ಒಂದಾಗಿ ಬಾಳಲು ಸಾಧ್ಯವಿಲ್ಲ ಎಂದೆನಿಸಿದಾಗ ಮುಸ್ಲಿಂ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕೊಲ್ಲುವುದಕ್ಕಿಂತ ಆಕೆಗೆ ವಿಚ್ಛೇದನ ನೀಡುವುದು ಉತ್ತಮ ಆಯ್ಕೆಯಾಗಿರುತ್ತದೆ ಎಂದು ಮಂಡಳಿಯು ತಿಳಿಸಿದೆ.

ಧರ್ಮವು ನೀಡಿರುವ ಹಕ್ಕುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಎಂದು ಹೇಳಿರುವ ಮಂಡಳಿಯು, ಕುರ್‌ಆನ್ ಪ್ರಶ್ನಿಸಬಹುದಾದ ಕಾನೂನುಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರ್ವೋಚ್ಚ ನ್ಯಾಯಾಲಯವು ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಮತ್ತು ಸಾಮಾಜಿಕ ಸುಧಾರಣೆಯ ಹೆಸರಿನಲ್ಲಿ ವೈಯಕ್ತಿಕ ಕಾನೂನುಗಳನ್ನು ಹೊಸದಾಗಿ ರೂಪಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News