×
Ad

ಕಾಶ್ಮೀರಕ್ಕೆ ಸರ್ವಪಕ್ಷ ನಿಯೋಗ

Update: 2016-09-03 23:35 IST

ಹೊಸದಿಲ್ಲಿ,ಸೆ.3: ಜಮ್ಮು-ಕಾಶ್ಮೀರಕ್ಕೆ ತೆರಳಲಿರುವ ಸರ್ವಪಕ್ಷ ನಿಯೋಗದ ಸದಸ್ಯರಾಗಿರುವ ಸಂಸದರಿಗೆ ರಾಜ್ಯದಲ್ಲಿನ ಪ್ರಚಲಿತ ಸ್ಥಿತಿಯ ಬಗ್ಗೆ ಅರಿವು ಮೂಡಿಸಲು ಸಂವಾದ ಕಾರ್ಯಕ್ರಮವೊಂದನ್ನು ಸರಕಾರವು ಶನಿವಾರ ಇಲ್ಲಿ ಹಮ್ಮಿಕೊಂಡಿತ್ತು. ಸಂಸದರು ವಿವಿಧ ವರ್ಗಗಳ ಜನತೆಯ ಜೊತೆ ಮಾತುಕತೆಗಳನ್ನು ನಡೆಸಲಿರುವ ಹಿನ್ನೆಲೆಯಲ್ಲಿ ಪ್ರವಾಸದ ಸ್ವರೂಪದ ಬಗ್ಗೆಯೂ ಅವರಿಗೆ ತಿಳುವಳಿಕೆ ನೀಡಲಾಯಿತು.
ಗೃಹಸಚಿವ ರಾಜನಾಥ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ಪ್ರಧಾನಿ ಕಚೇರಿಯಲ್ಲಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಮತ್ತು ಹಿರಿಯ ಅಧಿ ಕಾರಿಗಳು ಅಗತ್ಯ ಮಾಹಿತಿಗಳನ್ನು ನೀಡಿದರು.
ಜಮ್ಮು-ಕಾಶ್ಮೀರದಲ್ಲಿಯ ಪ್ರಚಲಿತ ಸ್ಥಿತಿ, ವಿವಿಧ ಪಾಲುದಾರರು, ವ್ಯಕ್ತಿಗಳು ಮತ್ತು ಗುಂಪುಗಳ ನಿಲುವುಗಳು ಮತ್ತು ಅಭಿಪ್ರಾಯಗಳನ್ನು ಸಂಸದರಿಗೆ ತಿಳಿಸಲಾಯಿತು.
ಎಲ್ಲ ಸಂಸದರು ಒಂದೇ ಧೋರಣೆಯಲ್ಲಿ ಮಾತನಾಡುವಂತಾಗಲು ಮತ್ತು ವಿವಿಧ ವರ್ಗಗಳ ಜನರೊಂದಿಗೆ ಮಾತುಕತೆ ನಡೆಸುವಾಗ ಅವರಲ್ಲಿ ಸಹಮತವಿರುವಂತೆ ನೋಡಿಕೊಳ್ಳುವುದು ಈ ಸಂವಾದ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿದವು.
ಶಾಂತಿ ಮರುಸ್ಥಾಪನೆಯ ಉದ್ದೇಶದೊಂದಿಗೆ ಎರಡು ದಿನಗಳ ನಿಯೋಗದ ಕಾಶ್ಮೀರ ಭೇಟಿಯು ರವಿವಾರದಿಂದ ಆರಂಭಗೊಳ್ಳಲಿದೆ.
ನಿಯೋಗದ ಸದಸ್ಯರು ಪ್ರತ್ಯೇಕತಾವಾದಿ ಗಳು ಸೇರಿದಂತೆ ಯಾರ ಜೊತೆಗೂ ಮಾತುಕತೆ ನಡೆಸಬಹುದಾಗಿದೆ. ಆದರೆ ರಾಜನಾಥ ಸಿಂಗ್ ಮತ್ತು ಇತರ ಕೇಂದ್ರ ಸಚಿವರು ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಿದ್ಧವಿರುವವರನ್ನು ಮಾತ್ರ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದವು.

ರಾಜನಾಥ್ ಮತ್ತು ಜಿತೇಂದ್ರ ಸಿಂಗ್ ಅಲ್ಲದೆ ವಿತ್ತ ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ, ಕೇಂದ್ರ ಸಚಿವ ರಾಂ ವಿಲಾಸ ಪಾಸ್ವಾನ್(ಎಲ್‌ಜೆಪಿ), ಜೆಡಿಯು ನಾಯಕ ಶರದ್ ಯಾದವ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಸಿಪಿಐ ನಾಯಕ ಡಿ.ರಾಜಾ ಮತ್ತಿತರರು ನಿಯೋಗದಲ್ಲಿರುತ್ತಾರೆ. ಬಿಎಸ್ಪಿ ಮತ್ತು ಎಸ್ಪಿ ನಿಯೋಗಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆಯಾದರೂ ತಮ್ಮ ಪ್ರತಿನಿಧಿಯಾಗಿ ಯಾರನ್ನೂ ನಾಮಕರಣಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News