ವಂಚಕಿಗೆ ಸಂಘಟನೆಯಲ್ಲಿ ಅವಕಾಶ ನೀಡಿದರೆ ಪ್ರತಿಭಟನೆ
ಮಂಗಳೂರು, ಸೆ.3: ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿ ನ್ಯಾಯಾಲಯದಲ್ಲಿ ವಿವಿಧ ಪ್ರಕರಣ ಎದುರಿಸುತ್ತಿರುವ ಹಸೀನಾ ಎಂಬವರನ್ನು ಜನನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಟ್ರಸ್ಟ್ ಸಂಘಟನೆಯಲ್ಲಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಈ ಟ್ರಸ್ಟ್‌ನ ಉದ್ಘಾಟನೆ ಸೆ.4 ರಂದು ನಡೆಯಲಿದ್ದು, ಅಲ್ಲಿಯೂ ಆಕೆ ವಂಚಿಸುವ ಸಾಧ್ಯತೆ ಇದೆ. ಆದ್ದರಿಂದ ಟ್ರಸ್ಟ್‌ನಿಂದ ಆಕೆಯನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ವಂಚನೆಗೊಳಗಾದವರ ಪರವಾಗಿ ಕಮಲಾಕ್ಷ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿಂತನ್ ಮಾರ್ಕೆಟಿಂಗ್ ಪ್ರೈವೇಟ್, ಜನನಿ ಫುಡ್ ಪ್ರೊಡಕ್ಟ್, ಯೂನಿಕ್ಸ್ ಫುಡ್ ಪ್ರೊಡಕ್ಟ್ ಹಾಗೂ ಇತರ ಹೊಸ ಕಂಪೆನಿಗಳನ್ನು ಹುಟ್ಟು ಹಾಕುತ್ತಾ ಹಲವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಜೈಲು ಸೇರಿದ್ದ ಆಕೆ ಕೆಲವು ದಿನಗಳ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದಾರೆ. ಅಪರಾಧ ಪ್ರವೃತ್ತಿ ಉಳ್ಳವರಿಗೆ ಸಾರ್ವಜನಿಕ ಸಂಘ ಸಂಸ್ಥೆಗಳು ಆಶ್ರಯ ನೀಡಿದರೆ ಅವರು ಅದನ್ನು ದುರುಪಯೋಗ ಮಾಡುತ್ತಾರೆ. ಕ್ರಿಮಿನಲ್ ಮೊಕದ್ದಮೆ ದಾಖಲಾದ ವ್ಯಕ್ತಿಗಳನ್ನು ಟ್ರಸ್ಟ್‌ನಲ್ಲಿ ಇಟ್ಟುಕೊಳ್ಳುವುದು ನ್ಯಾಯ ಸಮ್ಮತವಲ್ಲ. ಈ ಟ್ರಸ್ಟ್‌ನ ಗಣ್ಯರ ಹೆಸರನ್ನು ಹೇಳಿಕೊಂಡು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಕಮಲಾಕ್ಷ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪದ್ಮಿನಿ ರೈ ಹಾಗೂ ಶಿವಾನಂದ ಆಚಾರ್ಯ ಉಪಸ್ಥಿತರಿದ್ದರು.