ಮಹಾರಾಷ್ಟ್ರದ ಐವರು ನಿವೃತ್ತ ಅಧಿಕಾರಿಗಳು ಸಹಿತ 7 ಮಂದಿಯ ವಿರುದ್ಧ ಮೊಕದ್ದಮೆ
ಥಾಣೆ, ಸೆ.3: ರಾಯಗಡ ಜಿಲ್ಲೆಯ ಕರ್ಜತ್‌ನ ಕೊಂಡಾನೆ ನೀರಾವರಿ ಅಣೆಕಟ್ಟು ಯೋಜನೆಯಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಮಹಾರಾಷ್ಟ್ರ ಸರಕಾರದ ಐವರು ನಿವೃತ್ತ ಅಧಿಕಾರಿಗಳು ಸಹಿತ 7 ಮಂದಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಇಂದು ಪ್ರಕರಣವೊಂದನ್ನು ದಾಖಲಿಸಿದೆ.
ನೀರಾವರಿ ಇಲಾಖೆಯ ಐವರು ಮಾಜಿ ಅಧಿಕಾರಿಗಳೊಂದಿಗೆ, ಒಬ್ಬ ಅಮಾನತುಗೊಂಡಿರುವ ಅಧಿಕಾರಿ ಹಾಗೂ ಇನ್ನೊಬ್ಬ ನಿರ್ಮಾಣ ಸಂಸ್ಥೆಯೊಂದರ ಮಾಲಕನನ್ನು ಈ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಇಲ್ಲಿ ಕೊಪ್ರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆಯೆಂದು ಎಸಿಬಿಯ ಥಾಣೆ ಘಟಕ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ರಾಜ್ಯ ಸರಕಾರದ ಆದೇಶದಂತೆ ತನಿಖೆ ನಡೆಸಿದ ಬಳಿಕ ಈ ಪ್ರಕರಣ ದಾಖಲಿಸಲಾಗಿದೆ.
ಐಪಿಸಿಯ, ವಂಚನೆ ಹಾಗೂ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪರಿಚ್ಛೇದಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೂಕ್ತ ಪ್ರಸ್ತಾವಗಳನ್ವಯ ಆರೋಪಿಗಳ ವಿರುದ್ಧ ಪ್ರಕರಣ ಹೂಡಲಾಗಿದೆಯೆಂದು ಪೊಲೀಸ್ ಅಧೀಕ್ಷಕ (ಎಸಿಬಿ-ರಾಯಗಡ) ವಿವೇಕ್ ಜೋಶಿ ತಿಳಿಸಿದ್ದಾರೆ.
ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಡಿ.ಪಿ.ಶಿರ್ಕೆ, ಬಿ.ಬಿ.ಪಾಟೀಲ್, ಆರ್.ಡಿ.ಶಿಂಧೆ, ಪಿ.ಬಿ.ಸೋನಾವಣೆ, ಎ.ಪಿ.ಕಲುಕೆ, ಹಾಲಿ ಅಮಾನತಿನಲ್ಲಿರುವ, ಇಲಾಖೆಯ ಅಧಿಕಾರಿ ಆರ್.ಸಿ.ರಿಢೆ ಹಾಗೂ ನಿರ್ಮಾಣ ಸಂಸ್ಥೆ ಎಫ್.ಎ.ಕನ್‌ಸ್ಟ್ರಕ್ಷನ್‌ನ ಪಾಲುದಾರ ನಿಸಾರ್ ಫತೇಹ್ ಮುಹಮ್ಮದ್ ಖತ್ರಿ ಎಂಬವರು ಪ್ರಕರಣದ ಆರೋಪಿಗಳಾಗಿದ್ದಾರೆ.