×
Ad

ಕಾಶ್ಮೀರದಲ್ಲಿ ಗುಂಪು ನಿಯಂತ್ರಣಕ್ಕಾಗಿ ಮೆಣಸಿನ ಪುಡಿ ಬಳಕೆಗೆ ಸಿಂಗ್ ಅಸ್ತು

Update: 2016-09-03 23:39 IST

ಹೊಸದಿಲ್ಲಿ,ಸೆ.3: ಹಿಜ್ಬುಲ್ ಮುಜಾಹಿದೀನ್ ಉಗ್ರ ಬುರ್ಹಾನ್ ವಾನಿಯ ಹತ್ಯೆ ಬಳಿಕ ಪ್ರಕ್ಷುಬ್ಧಗೊಂಡಿರುವ ಕಾಶ್ಮೀರದಲ್ಲಿ ಹಿಂಸಾಚಾರನಿರತ ಗುಂಪುಗಳನ್ನು ನಿಯಂತ್ರಿಸಲು ಪಾಲೆಟ್ ಗನ್‌ಗಳಿಗೆ ಬದಲಾಗಿ ಮೆಣಸಿನ ಖಾರವನ್ನು ಹೊಂದಿರುವ ಗ್ರೆನೇಡ್‌ಗಳ ಬಳಕೆಗೆ ಗೃಹಸಚಿವ ರಾಜನಾಥ ಸಿಂಗ್ ಅವರು ಶನಿವಾರ ಹಸಿರು ನಿಶಾನೆ ತೋರಿಸಿದ್ದಾರೆ. ಪಾಲೆಟ್ ಗನ್‌ಗಳನ್ನು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುವುದು. ಸಿಂಗ್ ನೇತೃತ್ವದ ಸರ್ವಪಕ್ಷ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡುವ ಮುನ್ನಾದಿನ ಈ ನಿರ್ಧಾರ ಹೊರಬಿದ್ದಿದೆ.

ಪಾಲೆಟ್ ಗನ್‌ಗಳಿಗೆ ಪರ್ಯಾಯವಾಗಿ ನೋನಿವಾ ಮೈಡ್ ಎಂದೂ ಕರೆಯ ಲಾಗುವ ಪೆಲಾರ್ಗನಿಕ್ ಆ್ಯಸಿಡ್ ವನಿಲಿಲ್ ಅಮೈಡ್(ಪಾವಾ)ನ ಬಳಕೆಯ ಕಡತಕ್ಕೆ ಗೃಹಸಚಿವರು ಅಂಗೀಕಾರ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಸುಮಾರು 1000 ಪಾವಾ ಶೆಲ್‌ಗಳು ರವಿವಾರ ಕಾಶ್ಮೀರ ಕಣಿವೆಯನ್ನು ತಲುಪಲಿವೆ ಎಂದು ಅವು ಹೇಳಿದವು.
ಆ.24-25ರಂದು ತನ್ನ ಕಾಶ್ಮೀರ ಭೇಟಿ ಸಂದರ್ಭ ಸಿಂಗ್ ಅವರು ಮುಂಬರುವ ದಿನಗಳಲ್ಲಿ ಪಾಲೆಟ್ ಗನ್‌ಗಳಿಗೆ ಪರ್ಯಾಯವನ್ನು ಭದ್ರತಾ ಪಡೆಗಳಿಗೆ ನೀಡಲಾಗುವುದು ಎಂದು ತಿಳಿಸಿದ್ದರು.
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಟಿವಿಎಸ್‌ಎನ್ ಪ್ರಸಾದ್ ನೇತೃತ್ವದ ತಜ್ಞರ ಸಮಿತಿಯೊಂದು ಆ.29ಕ್ಕೆ ಸಲ್ಲಿಸಿದ್ದ ತನ್ನ ವರದಿಯಲ್ಲಿ ಪಾವಾ ಶೆಲ್‌ಗಳ ಬಳಕೆಗೆ ಶಿಫಾರಸು ಮಾಡಿತ್ತು. ಕಾಶ್ಮೀರ ಕಣಿವೆಯಲ್ಲಿ ಪಾಲೆಟ್ ಗನ್‌ಗಳ ಬಳಕೆಯಿಂದ ಹಲವಾರು ಪ್ರತಿಭಟನಾಕಾರರು ಕಣ್ಣುಗಳನ್ನು ಕಳೆದುಕೊಂಡ ನಂತರ ಈ ಸಮಿತಿಯನ್ನು ರಚಿಸಲಾಗಿತ್ತು.
ಪಾವಾ ಶೆಲ್ ಕಡಿಮೆ ಹಾನಿಯನ್ನುಂಟು ಮಾಡುತ್ತಿದ್ದು,ವ್ಯಕ್ತಿಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News