ಸರಕಾರದಿಂದ ಎಂಡೋ ಸಂತ್ರಸ್ತರಿಗೆ ಓಣಂ ಉಡುಗೊರೆ
ಕಾಸರಗೋಡು, ಸೆ.3: ಎಂಡೋ ಸಂತ್ರಸ್ತರಿಗೆ ಕೇರಳ ಸರಕಾರ ಓಣಂ ಕೊಡುಗೆ ಪ್ರಕಟಿಸಿದ್ದು, ಸರಕಾರಿ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ತಲಾ ಒಂದು ಸಾವಿರ ರೂ. ನೀಡಲಿದೆ.
ಇದೇ ಮೊದಲ ಬಾರಿ ಎಂಡೋ ಸಂತ್ರಸ್ತರಿಗೆ ಇಂತಹ ಯೋಜನೆ ಘೋಷಿಸಲಾಗಿದ್ದು, ಇದಕ್ಕಾಗಿ ಸರಕಾರವು 46 ಲಕ್ಷ ರೂ. ಮೀಸಲಿರಿಸಿದೆ. ಸರಕಾರಿ ಮಾಸಾಶನ ಪಡೆಯುತ್ತಿರುವ 4,600 ಸಂತ್ರಸ್ತರಿಗೆ ಈ ಸೌಲಭ್ಯ ಲಭಿಸಲಿದೆ. ಪ್ರಸ್ತುತ ಎಂಡೋ ಸಂತ್ರಸ್ತರಿಗೆ ಒಂದು ಸಾವಿರದಿಂದ ಮೂರು ಸಾವಿರ ರೂ.ವರೆಗೆ ಮಾಸಾಶನ ಲಭಿಸುತ್ತಿದೆ. ಈ ಸಂತ್ರಸ್ತರಲ್ಲದೆ ವೈದ್ಯಕೀಯ ಶಿಬಿರಗಳಲ್ಲಿ ಗುರುತಿಸಲಾಗಿರುವ ರೋಗಿಗಳಿಗೂ ಈ ಸೌಲಭ್ಯ ನೀಡುವ ನಿಟ್ಟಿನಲ್ಲಿ ಸರಕಾರ ಗಮನಹರಿಸಿದೆ. ಓಣಂ ಸಂದರ್ಭದಲ್ಲಿ ಎಂಡೋ ಸಂತ್ರಸ್ತರಿಗೆ ಆರ್ಥಿಕ ಮುಗ್ಗಟ್ಟು ಉಂಟಾಗದಿರಲು ತಲಾ ಒಂದು ಸಾವಿರ ರೂ. ನೀಡುವ ಕುರಿತಂತೆ ಕಂದಾಯ ಸಚಿವ ಇ. ಚಂದ್ರಶೇಖರನ್ ಸರಕಾರಿ ಮಟ್ಟದಲ್ಲಿ ಆಗ್ರಹಿಸಿದ್ದರು. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಚರ್ಚೆ ನಡೆಸಿತ್ತು. ಕೊನೆಗೆ ರಾಜ್ಯ ಸಚಿವ ಸಂಪುಟ ಈ ಬೇಡಿಕೆಗೆ ಅನುಮೋದನೆ ನೀಡಿದೆ.
ಅಂಕಿಅಂಶಗಳ ಪ್ರಕಾರ ಆರು ಸಾವಿರ ಎಂಡೋ ಸಂತ್ರಸ್ತ ರಿದ್ದಾರೆ. ಆದರೆ ಓಣಂ ಕೊಡುಗೆಯಾಗಿ ನೀಡಲಾಗುವ ಒಂದು ಸಾವಿರ ರೂ. ಎಷ್ಟು ಮಂದಿಗೆ ಲಭಿಸಲಿದೆ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಸರಕಾರದ ಬಳಿ ಯಿರುವ ದಾಖಲೆಯನ್ವಯ 4,600ರಷ್ಟು ಸಂತ್ರಸ್ತರಿಗೆ ಈ ಸೌಲಭ್ಯ ಲಭಿಸಲಿದ್ದು, ಉಳಿದವರ ಬಗ್ಗೆ ಶೀಘ್ರ ತೀರ್ಮಾನ ಹೊರಬೀಳಲಿದೆ. ‘‘ಓಣಂ ಪ್ರಯುಕ್ತ ಎಂಡೋ ಸಂತ್ರಸ್ತರಿಗೆ ಸರಕಾರ ನೀಡಿ ರುವ ಕೊಡುಗೆ ಸ್ವಾಗತಾರ್ಹ ಬೆಳವಣಿಗೆ. ಈ ಕೊಡುಗೆ ಎಲ್ಲ ಸಂತ್ರಸ್ತರಿಗೂ ಲಭಿಸುವಂತಾಗಬೇಕು’’ ಎಂದು ಎಂಡೋ ಸಂತ್ರಸ್ತರ ಪರ ಹೋರಾಟಗಾರ ಅಂಬಲತ್ತರ ಕುಂಞಿಕೃಷ್ಣನ್ ಒತ್ತಾಯಿಸಿದ್ದಾರೆ.
ಸವಲತ್ತು ವಿತರಣೆ ವಿಳಂಬ: ಪ್ರತಿಭಟನೆ
ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಸರಕಾರ ಘೋಷಿಸಿ ರುವ ಸವಲತ್ತುಗಳ ವಿತರಣೆಯಲ್ಲಿ ವಿಳಂಬವಾಗಿ ರುವುದನ್ನು ಪ್ರತಿಭಟಿಸಿ ಜನಪರ ಪೀಡಿತರ ಒಕ್ಕೂಟವು ಶನಿವಾರ ಕಾಸರಗೋಡು ನಗರ ಸಭಾಂಗಣದಲ್ಲಿ ಹಕ್ಕು ಘೋಷಣಾ ಸಮ್ಮೇಳನ ಆಯೋಜಿಸಿತ್ತು.
ಕೂಡಂಕುಳಂ ಅಣು ಸ್ಥಾವರ ವಿರೋಧಿ ಹೋರಾಟಗಾರ ಎಸ್.ಪಿ.ಉದಯ ಕುಮಾರ್ ಸಮ್ಮೇಳನ ಉದ್ಘಾಟಿಸಿದರು. ಸಮಾರಂಭದಲ್ಲಿ ಎಂ.ಎಂ.ರಹ್ಮಾನ್, ಅಂಬಲತ್ತರ ಕುಂಞಿಕೃಷ್ಣನ್, ಮುನಿಸಾ ಅಂಬಲತ್ತರ ಮೊದಲಾದವರು ಉಪಸ್ಥಿತರಿದ್ದರು