‘‘ಸಮಾಜಘಾತುಕ ಕೃತ್ಯ ಎಸಗುತ್ತಿರುವ ‘ಗೋರಕ್ಷಕ’ರೆಂಬ ಸೂತ್ರಧಾರರನ್ನು ಬಂಧಿಸಿದರೆ ಹಿಂಸಾಚಾರಕ್ಕೆ ಕಡಿವಾಣ ಸಾಧ್ಯ’’
ಮಂಗಳೂರು, ಸೆ.4: ಗೋರಕ್ಷಣೆಯ ಹೆಸರಿನಲ್ಲಿ ಸಮಾಜಘಾತುಕ ಕೃತ್ಯದಲ್ಲಿ ತೊಡಗಿರುವ ನಕಲಿ ಗೋರಕ್ಷಕರ ಸೂತ್ರಧಾರರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿದರೆ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಡಿವಾಣ ಬೀಳಬಹುದು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಿಸಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಗೋರಕ್ಷಣೆಯ ಹೆಸರಿನಲ್ಲಿ ಸಮಾಜದಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ ಎಂದರು.
ಜನಸಂಘಕ್ಕೂ ಸ್ವಾತಂತ್ರ ಹೋರಾಟಕ್ಕೂ ಯಾವುದೆ ಸಂಬಂಧವಿಲ್ಲ. ಅವರು ಕರಿಕೋಟು ಮತ್ತು ಖಾಕಿ ಚೆಡ್ಡಿ ಹಾಕಿ ಬ್ರಿಟಿಷರ ಜೊತೆ ಶಾಮೀಲಾಗಿದ್ದರು.ಇಂತವರಿಂದ ದೇಶಪ್ರೇಮ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ಇಂತಹ ನಕಲಿ ದೇಶ ಭಕ್ತರ ಬಗ್ಗೆ ಎಚ್ಚರದಿಂದರಬೇಕಾಗಿದೆ ಎಂದು ಹೇಳಿದರು.
ಅಬ್ಬಕ್ಕ ದೇವಿಯ ಜನ್ಮ ಭೂಮಿಯಲ್ಲಿ ಮಾಜಿ ಸಂಸದೆ ರಮ್ಯಾರಿಗೆ ಚಪ್ಪಲಿ, ಟೊಮೆಟೊ ಎಸೆದಿರುವ ಹೇಯಕೃತ್ಯ ಸಂಘಪರಿವಾರದ ರಣಹೇಡಿಗಳನ್ನು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ ಲಭಿಸಿದ ನಂತರ ದೇಶವನ್ನು ಮತ್ತೆ ಇಬ್ಭಾವಾಗದ ರೀತಿಯಲ್ಲಿ ನೋಡಿಕೊಂಡಿದೆ. ಆದರೆ ಸಂಘ ಪರಿವಾರ ಸುಳ್ಳು ಪ್ರಚಾರದಲ್ಲಿ ನಿಸ್ಸೀಮವಾಗಿದ್ದು, ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ನಡೆಸುತ್ತಿದೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಆಗುತ್ತಿರುವ ಕೆಲವೊಂದು ಬೆಳವಣಿಗೆಗಳು ಕಳವಳಕಾರಿಯಾಗಿದ್ದು, ಜಿಲ್ಲೆಯ ಹೆಸರಿಗೆ ಮಸಿ ಬಳಿಯಲು ಯಾವುದೋ ದುಷ್ಟಶಕ್ತಿಗಳು ಯತ್ನಿಸುತ್ತಿವೆ ಎಂದು ಅವರು ಹೇಳಿದರು.
ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ಇರುವ ವ್ಯಾಜ್ಯವನ್ನು ತಾಂತ್ರಿಕವಾಗಿ, ಕಾನೂನಾತ್ಮಕವಾಗಿ ಬದಲಾಯಿಸಲು ಸಾಧ್ಯವಿಲ್ಲ. ಸಂಧಾನ, ಮಾತುಕತೆ ಮೂಲಕ ಮಾತ್ರ ಇದನ್ನು ಬಗೆಹರಿಸಲು ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕಾಂಗ್ರೆಸ್ ಮುಖಂಡರಾದ ಪಿ.ವಿ.ಮೋಹನ್, ಪದ್ಮನಾಭ ನರಿಂಗಾನ, ಬಾಲಕೃಷ್ಣ ಶೆಟ್ಟಿ, ಸುಧೀರ್ ಟಿ.ಕೆ. ನಝೀರ್ ಬಜಾಲ್, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.