ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಎಳನೀರಿನ ಸೋಡಾ!
ಕಾಸರಗೋಡು, ಸೆ.4: ಈಗಾಗಲೇ ಹಲವು ಪಾನೀಯ, ಆಹಾರ ಸಾಮಗ್ರಿಗಳ ತಯಾರಿಕೆಯ ಮೂಲಕ ಗಮನ ಸೆಳೆದಿರುವ ಕಾಸರಗೋಡು ಕೇಂದ್ರ ತೋಟಗಾರಿಕಾ ಬೆಳೆ ಸಂಶೋಧನಾ ಕೇಂದ್ರ(ಸಿಪಿಸಿಆರ್‌ಐ) ಇದೀಗ ಎಳನೀರಿನಿಂದ ಸೋಡಾ ತಯಾರಿಸುವ ಮೂಲಕ ಮತ್ತೊಂದು ಸಾಹಸ ಮೆರೆದಿದೆ.
ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ.ನಿಲೋಫರ್ ಈ ಪಾನೀಯ ಉತ್ಪಾದಿಸಿ ಮಾರುಕಟ್ಟೆಗೆ ಇಳಿಸುವಲ್ಲಿ ಸಫಲರಾಗಿದ್ದಾರೆ.
ಮೊಗ್ರಾಲ್ ಪುತ್ತೂರಿನ ನಸೀಬ್ ಎಂಬವರು ತಮ್ಮ ತಂತ್ರಜ್ಞಾನ ಬಳಸಿ ಇಂತಹ ಯೋಜನೆಗೆ ಮುಂದೆ ಬಂದಿದ್ದಾರೆ. ಎಳನೀರಿಗೆ ಕಾರ್ಬೊನೇಟ್ ಬೆರೆಸಿ ಈ ಸೋಡಾ ತಯಾರಿಸಲಾಗುತ್ತಿದೆ.
ಸಕ್ಕರೆ ಬದಲು ಗ್ಲುಕೋಸ್ ಹುಡಿ ಬಳಸಲಾಗುತ್ತಿದೆ. ಹಲವು ತೆಂಗಿನಿಂದ ಲಭಿಸುವ ಎಳನೀರು ಹಲವು ರುಚಿಯನ್ನು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಒಂದೇ ರುಚಿಗೆ ಬರುವಂತೆ ಮಾಡುವುದಕ್ಕಾಗಿ ಗ್ಲುಕೋಸ್ ಬಳಸಲಾಗುತ್ತಿದೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ಈ ಪಾನೀಯ ಮಾರುಕಟ್ಟೆಗೆ ಬರುತ್ತಿದೆ. ಇದನ್ನು ಎರಡು ತಿಂಗಳ ಕಾಲ ಬಳಸಬಹುದಾಗಿದೆ. ಫ್ರಿಡ್ಜ್‌ನಲ್ಲಿಟ್ಟು ನಾಲ್ಕು ತಿಂಗಳು ಕಾಲ ಬಳಸಬಹುದು. ಇದನ್ನು ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ತಯಾರಿಸಲಾಗುತ್ತಿದ್ದು, ಹಾಳಾಗದ ರೀತಿಯಲ್ಲಿ ಇದನ್ನು ತಯಾರಿಸಲಾಗುತ್ತಿದೆ.
‘ಫ್ರೆಷ್ ಅಪ್’ ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಂದಿರುವ ಈ ಎಳನೀರು ಸೋಡಾ 200 ಮಿ.ಲೀ., 600 ಮಿ.ಲೀ. ಹಾಗೂ ಒಂದು ಲೀಟರ್‌ಗಳಲ್ಲಿ ಲಭ್ಯ.
200 ಮಿ.ಲೀ.ಗೆ 25 ರೂ., 600 ಮಿ.ಲೀ.ಗೆ 55 ರೂ. ದರ ಹೊಂದಿದೆ. ಮಂಗಳೂರು ಹಾಗೂ ಇತರ ಕಡೆಗಳ ಮಾರುಕಟ್ಟೆಗಳಲ್ಲೂ ಈ ಎಳನೀರು ಸೋಡಾ ಲಭಿಸುತ್ತಿದೆ ಎಂದು ಡಾ.ನಿಲೋಫರ್ ತಿಳಿಸಿದ್ದಾರೆ. ಈಗಾಗಲೇ ತೆಂಗಿನಿಂದ ಅಮಲುರಹಿತ ನೀರು, ಚಾಕ್ಲೇಟ್, ಚಿಪ್ಸ್, ಹಲವು ರೀತಿಯ ತಿನಿಸು, ಪಾನೀಯಗಳನ್ನು ತಯಾರಿಸಿ ಹೊಸ ಕ್ರಾಂತಿ ಮಾಡಿದ್ದ ಸಿಪಿಸಿಆರ್‌ಐ ಇದೀಗ ಎಳನೀರು ಸೋಡಾ ತಯಾರಿಸುವ ಮೂಲಕ ಮತ್ತೊಂದು ಹೆಜ್ಜೆ ಇರಿಸಿದೆ.