×
Ad

ಪೊಲೀಸ್ ಇಲಾಖೆಯಿಂದ ‘ಸೌಹಾರ್ದ ಟ್ರೋಫಿ’ ವಾಲಿಬಾಲ್ ಪಂದ್ಯಾಟ

Update: 2016-09-04 16:52 IST

ಪುತ್ತೂರು,ಸೆ.4: ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಅವರಿಗೆ ಸೂಕ್ತ ಮಾರ್ಗದರ್ಶನದ ಕೊರತೆಯಿದೆ. ಇದರಿಂದಾಗಿ ಅವರ ಉತ್ತಮ ಪ್ರತಿಭೆಗಳು ಇತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ, ಉತ್ತೇಜನ ನೀಡಿದರೆ ಒಲಿಂಪಿಕ್ ಕ್ರೀಡಾಕೂಟದಲ್ಲೂ 10 ಪಟ್ಟು ಹೆಚ್ಚು ಪದಕಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸದ ಅಧೀಕ್ಷಕ ರಿಷ್ಯಂತ್ .ಬಿ ಅಭಿಪ್ರಾಯ ವ್ಯಕ್ತಪಡಿಸಿದರು.

ದ.ಕ ಜಿಲ್ಲಾ ಪೊಲೀಸ್ ಪುತ್ತೂರು ಉಪವಿಭಾಗ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಆಶ್ರಯದಲ್ಲಿ ಭಾನುವಾರ ಸಂಪ್ಯ ಹಿ.ಪ್ರಾ ಶಾಲಾ ಕ್ರೀಡಾಂಗಣದಲ್ಲಿ ನಡೆದ ಸೌಹಾರ್ಧ ಟ್ರೋಫಿ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯೆಂಬುದು ಕೇವಲ ಮೋಜಿಗಾಗಿ ಅಲ್ಲ. ಅದು ಜೀವನದ ಒಂದು ಅಂಗ. ದ.ಕ ಜಿಲ್ಲೆಯ ಜನರು ಸಾಕಷ್ಟು ಬಲಾಡ್ಯರು. ಉತ್ತಮ ದೃಡಕಾಯ ಹೊಂದಿರುವವರೇ ಅಧಿಕ. ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಲು ಅರ್ಹರಿವವರು ಇದ್ದಾರೆ. ಅಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಉತ್ತೇಜನಗಳನ್ನು ನೀಡಬೇಕಾದ ಆವಶ್ಯಕತೆಯಿದೆ ಎಂದು ಅವರು ಹೇಳಿದರು.

ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ, ಸಂಪ್ಯ ಮಸೀದಿ ಖತೀಬ್ ಜಿ. ಅಬ್ದುಲ್ ಹಮೀದ್ ದಾರೀಮಿ, ಸುದಾನ ದೇವಾಲಯದ ಧರ್ಮಗುರು ರೆ. ವಿಜಯ ಹಾರ್ವಿನ್, ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪ್ಯ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಪ್ಯ ಠಾಣಾ ಉಪನಿರೀಕ್ಷಕ ಅಬ್ದುಲ್ ಖಾದರ್ ಸ್ವಾಗತಿಸಿದರು. ಸಿಬಂದಿಗಳಾದ ಗಾಯತ್ರಿ ಎ ಕಾರ್ಯಕ್ರಮ ನಿರೂಪಿಸಿ, ಕರುಣಾಕರ ವಂದಿಸಿದರು. ಎಎಸ್‌ಐ ನಾರಾಯಣ ಗೌಡ, ಸಿಬಂದಿಗಳಾದ ಚಂದ್ರಶೇಖರ್, ಶಿವಪ್ಪ ಪೂಜಾರಿ, ಶಿವರಾಮ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ದಿವಾಕರ, ಅವಿನ್ ಕುಮಾರ್ ಹಾಗೂ ಯತೀಶ್ ತೀರ್ಪುಗಾರರಾಗಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News