×
Ad

ಉತ್ತರಪ್ರದೇಶದ ಚುನಾವಣಾ ಪ್ರಚಾರಕ್ಕೆ ಕನ್ಹಯ್ಯಾಕುಮಾರ್

Update: 2016-09-04 17:34 IST

ಲಕ್ನೊ,ಸೆಪ್ಟಂಬರ್ 4: ಎಡಪಂಥೀಯ ಯುವಕರ ಆಶಾಕಿರಣವಾಗಿ ಪರಿವರ್ತನೆಗೊಂಡ ದಿಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಸೆ.18ರಿಂದ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಲಿದ್ದಾರೆ ಎಂದು ವರದಿಯಾಗಿದೆ.

ಉತ್ತರಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆನಡೆಯಲಿದ್ದು ಅವರು ಲಕ್ನೊ ಮತ್ತು ಪೈಝಾಬಾದ್‌ನಲ್ಲಿ ಯುವಕರನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಪೈಝಾಬಾದ್ ಈ ಹಿಂದೊಮ್ಮೆ ಎಡಪಂಥೀಯರ ಕೋಟೆ ಎಂದು ಕರೆಸಿಕೊಂಡಿತ್ತು ಎಂದು ವರದಿ ತಿಳಿಸಿದೆ. ಅಲ್ಲಿಂದ ಭಾರತೀಯ ಕಮ್ಯೂನಿಸ್ಟ್‌ಪಕ್ಷದ ಬ್ಯಾನರ್‌ನಲ್ಲಿ ಮಿತ್ರಸೇನ್ ಯಾದವ್ ಸಂಸದರಾಗಿದ್ದರು ಮತ್ತು ಅವರು ಶಾಸಕರಾಗಿಯೂ ಆಯ್ಕೆಯಾಗಿದ್ದರು. ರಾಜಬಲಿ ಯಾದವ್ ಫೈಝಾಬಾದ್‌ನ ಗೋಶಾಂಯಿಗಂಜ್ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಬಹುದೊಡ್ಡ ನಾಯಕನಾಗಿದ್ದರು. ಅವರ ಹಿಂದೆ ಜನರ ಸಮೂಹವೇ ಸೇರುತ್ತಿತ್ತು ಎನ್ನಲಾಗಿದೆ.

ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷ ಸಹಿತ ಇತರ ಎಡಪಕ್ಷಗಳು ಒಟ್ಟಾಗಿ ಉತ್ತರಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಭಾರತೀಯ ಕಮ್ಯೂನಿಸ್ಟ್ ಪಕ್ಷದ ಉತ್ತರ ಪ್ರದೇಶದ ಮಾಜಿ ಕಾರ್ಯದರ್ಶಿಯಾಗಿರುವ ಅಶೋಕ್ ಮಿಶ್ರ ಅವರು ಈ ಕುರಿತು ಸ್ಪಷ್ಟಪಡಿಸಿದ್ದು,"ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಎಲ್ಲ ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾಗಿದೆ. ಎಡಪಕ್ಷಗಳು ಒಗ್ಗೂಡಿ ಚುನಾವಣೆಯನ್ನು ಎದುರಿಸಲು ನಿರ್ಧರಿಸಿವೆ. ಎಂಡಪಂಥೀಯ ವಿಚಾರಧಾರೆಗಳ ಯುವಕರನ್ನು ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ. ಯುವಕರಿಗೆ ಇಂದು ಕನ್ಹಯ್ಯಾ ಕುಮಾರ್ ಮಾದರಿ ವ್ಯಕ್ತಿಯಾಗಿ ಬೆಳೆದಿದ್ದಾರೆ. ಆದ್ದರಿಂದ ಎಡಪಕ್ಷಗಳು ಯುವಕರನ್ನು ಸಕ್ರಿಯಗೊಳಿಸುವ ಹೊಣೆಯನ್ನುಕನ್ಹಯ್ಯಾಕುಮಾರ್‌ಗೆ ವಹಿಸಲು ನಿರ್ಧರಿಸಿವೆ. ಆಮೂಲಕ ಉತ್ತರಪ್ರದೇಶದ ಕೋಮುವಾದಿ ಶಕ್ತಿಗಳನ್ನು ವಿಫಲಗೊಳಿಸಲು ಸಾಧ್ಯವಾಗಬಹುದು" ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News