×
Ad

ಸೌಹಾರ್ದ ಮಂಗಳೂರಿಗಾಗಿ ಒಂದು ಒಗ್ಗಟ್ಟಿನ ಪ್ರಯತ್ನ : ಸೆ.9 ರಂದು ನಡೆಯಲಿದೆ ಒಂದು ವಿಭಿನ್ನ ಕಾರ್ಯಕ್ರಮ

Update: 2016-09-04 18:06 IST

 ಮಂಗಳೂರು, ಸೆ.4: ಮಂಗಳೂರಿನಲ್ಲಿ ಕಳೆದ ಎರಡೂವರೆ ದಶಕಗಳಿಂದ ಸೌಹಾರ್ದ ವಾವಾವರಣಕ್ಕೆ ಧಕ್ಕೆ ಬಂದಿದೆ. ಧರ್ಮ, ಜಾತಿ, ದೇವರುಗಳ ಹೆಸರಿನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವಾರು ಘಟನೆಗಳು ಶಾಂತಿ ಪ್ರೀಯ ಮಂಗಳೂರಿಗರನ್ನು ಭೀತಿಯಲ್ಲಿ ಜೀವಿಸುವಂತೆ ಮಾಡಿದೆ. ಇಂತಹ ಮಂಗಳೂರಿನಲ್ಲಿ ಶಾಂತಿ , ಸೌಹಾರ್ದ ನೆಲೆಸಲು ಹೊಸ ಪ್ರಯತ್ನವೊಂದು ನಡೆದಿದೆ.

      ವಿವಿಧ ಧರ್ಮ, ಜಾತಿಗಳಲ್ಲಿ ಇರುವ ಶಾಂತಿ ಪ್ರೀಯರು ಒಂದಾಗಿ ಯುನೈಟೆಡ್ ಫಾರ್ ಬೆಟರ್ ಮಂಗಳೂರು ಎಂಬ ತಂಡ ರಚಿಸಿ ಯುನೈಟೆಡ್ ಫಾರ್ ಬೆಟರ್ ಮಂಗಳೂರು ಎಂಬ ಕಾರ್ಯಕ್ರಮವನ್ನು ಸೆ.9 ರಂದು ಆಯೋಜಿಸಲು ನಿರ್ಧರಿಸಿದ್ದಾರೆ. ರಾಜಕೀಯ ಪಕ್ಷ ಮತ್ತು ಬಲಪಂಥೀಯ ಸಂಘಟನೆಗಳನ್ನು ಹೊರತುಪಡಿಸಿ ಎಲ್ಲ ಜಾತಿ ,ಧರ್ಮಗಳ ಶಾಂತಿ ಪ್ರಿಯರು ಇಲ್ಲಿ ಒಟ್ಟಾಗಿ ಈ ಕಾರ್ಯಕ್ರಮದ ಮೂಲಕ ಸೌಹಾರ್ದದ ಸಂದೇಶವನ್ನು ನೀಡಲಿದ್ದಾರೆ.

 ಜಿಲ್ಲೆಯ ವಿವಿಧ ಸಂಘಟನೆಗಳಾದ ಅಹಿಂದ ದ.ಕ ಜಿಲ್ಲೆ, ಅಲ್ ಹಕ್ ಫೌಂಡೇಶನ್, ಬಂಟರ ಯಾನೆ ನಾಡವರ ಮಾತೃ ಸಂಘ, ಮೊಗವೀರ ಮಹಾಜನ ಸಂಘ, ಶ್ರೀಗುರು ಸಿಂಘ್ ಸಭಾ ಸೊಸೈಟಿ, ಯುವ ವಾಹಿನಿ ಕೇಂದ್ರ ಸಮಿತಿ, ಕ್ಯಾಥೊಲಿಕ್ ಡಯೋಸಿಸ್ ಆಫ್ ಮಂಗಳೂರು, ದಸಂಸ( ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ದ.ಕ ಜಿಲ್ಲೆ, ಜೈನ್ ಸಮಿತಿ ಮಂಗಳೂರು, ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಮಿಷನ್ ನೆಟ್‌ವರ್ಕ್ ದ.ಕ ಜಿಲ್ಲೆ,ಹಿದಾಯ ಫೌಂಡೇಶನ್, ಹೈಲ್ಯಾಂಡ್ ಇಸ್ಲಾಮಿಕ್ ಫೋರಂ, ಹೋಪ್ ಫೌಂಡೇಶನ್, ಕೆಕೆಎಂಎ ಕರ್ನಾಟಕ ಬ್ರಾಂಚ್, ಎಂ- ಪ್ರೆಂಡ್ಸ್ , ಮುಸ್ಲಿಂ ಲೇಖಕರ ಸಂಘ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಗಳು ಒಟ್ಟಾಗಿ ಸೇರಿ ಜನರಲ್ಲಿ ಸೌಹಾರ್ದವನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಸೆ.9 ರಂದು ನಗರದ ಪುರಭವನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಹಿಂದು, ಇಸ್ಲಾಂ, ಕ್ರಿಶ್ಚಿಯನ್ , ಜೈನ, ಸಿಖ್ ಧರ್ಮಗಳ ಧಾರ್ಮಿಕ ಚಿಂತಕರು, ಮಂಗಳೂರು ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ಮತ್ತು ಡಿಸಿಪಿ ಯವರು ಪಾಲ್ಗೊಳ್ಳಲಿದ್ದಾರೆ.

 ಮಂಗಳೂರಿನಲ್ಲಿ ಸಹೋದರತೆ, ಶಾಂತಿ ನೆಲಸಬೇಕು , ಜಿಲ್ಲೆಯಲ್ಲಿ ಎಲ್ಲ ಮತದವರು ಸಹೋದರರಾಗಿ ಬಾಳಬೇಕಾದ ಶಾಂತಿ ವಾತವರಣ ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಜನರಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರಲಾಗುತ್ತದೆ. ಮುಂದೆ ಇನ್ನಷ್ಟು ಕಾರ್ಯಕ್ರಮಗಳ ಮೂಲಕ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.
ವಾಸುದೇವ ಬೋಳೂರು, ಅಧ್ಯಕ್ಷ, ಅಹಿಂದ, ದ.ಕ ಜಿಲ್ಲೆ

ಜಿಲ್ಲೆಯಲ್ಲಿ ಸೌಹಾರ್ದಮೂಡಿಸಲು ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ. ವಿವಿಧ ಸಮುದಾಯಗಳಲ್ಲಿ ಇರುವ ಹಲವಾರು ಸಮಸ್ಯೆಗಳಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಎಲ್ಲಾ ಸಮುದಾಯದವರು ಒಟ್ಟಾಗಿ ಸೇರಿ ಪರಿಹರಿಸಲು ಬೇಕಾದ ಪ್ರಯತ್ನ ಮಾಡುತ್ತಿದ್ದೇವೆ.

 ಸೈಫ್ ಸುಲ್ತಾನ್, ಹೋಪ್ ಫೌಂಡೇಶನ್

 ಮಂಗಳೂರಿನಲ್ಲಿ ಎಲ್ಲಾ ಸಮಾಜದವರಿದ್ದಾರೆ. ಆದರೂ ಇಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ಜನರನ್ನು ಒಟ್ಟಿಗೆ ಸೇರಿಸಿಕೊಂಡು ಹೋಗಬೇಕೆನ್ನುವ ನೆಲೆಯಲ್ಲಿ ನಮ್ಮ ಕಡೆಯಿಂದ ಒಂದು ಪ್ರಯತ್ನದ ಅಂಗವಾಗಿ ಸೆ.9 ರಂದು ಯುನೈಟೆಡ್ ಫಾರ್ ಬೆಟರ್ ಮಂಗಳೂರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಇಕ್ಬಾಲ್ ಸಿಂಗ್, ಶ್ರೀ ಗುರುಸಿಂಗ್ ಸಭಾ ಸೊಸೈಟಿ ಮುಖಂಡರು.

 ಮಂಗಳೂರಿನಲ್ಲಿ ಮುಸ್ಲಿಂ, ಕ್ರೈಸ್ತ, ಹಿಂದೂ ಸಮಾಜದ ಜನರು ಬದುಕುತ್ತಿದ್ದಾರೆ. ಈ ಸಮುದಾಯಗಳ ನಡುವೆ ಅನೋನ್ಯತೆಯನ್ನು ಬಲಪಡಿಸಲು , ಏಕತೆಯನ್ನು ಮೂಡಿಸುವ ಉದ್ದೇಶದೊಂದಿಗೆ ಸೆ.9 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಭರತ್ ಜೈನ್, ಜೈನ್ ಸಮಿತಿ ಮಂಗಳೂರು, ಮುಖಂಡರು.

   ಮಂಗಳೂರಿನಲ್ಲಿ ಹಿಂದೆ ಇದ್ದ ಪರಿಸ್ಥಿತಿ ಈಗ ಇಲ್ಲ. ಜಿಲ್ಲೆಯಲ್ಲಿ ಅನ್ಯೋನ್ಯತೆಗೆ ಧಕ್ಕೆ ಬಂದಿದೆ. ಜನರು ಇತರ ಧರ್ಮಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ.ಇದರಿಂದ ನಗರದ ಅಭಿವೃದ್ದಿಗೆ ತೊಡಕಾಗಿದೆ. ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ವಿದೇಶಗಳಲ್ಲಿಯೂ ಮಂಗಳೂರು ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಬಂದಿದೆ. ಈ ಭಾವನೆಗಳನ್ನು ಹೋಗಲಾಡಿಸಲು ಈ ಹೊಸ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಪ್ರೇಮನಾಥ, ಮಾಜಿ ಅಧ್ಯಕ್ಷರು, ಯುವ ವಾಹಿನಿ, ಕೇಂದ್ರ ಸಮಿತಿ

      ಪ್ರಸಕ್ತ ಮಂಗಳೂರಿನಲ್ಲಿ ಇರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಮಾಡುವ ಮೂಲಕ ನಾವೆಲ್ಲ ಒಟ್ಟಾಗಿದ್ದೇವೆ ಎಂಬ ಸಂದೇಶ ನೀಡಲು ಈ ಪ್ರಯತ್ನ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಯುವಕರನ್ನು ಮನವೊಲಿಸುವ ಪ್ರಯತ್ನವನ್ನು ಮಾಡುವ ಉದ್ದೇಶವನ್ನಿಡಲಾಗಿದೆ.

ಅನಿಲ್ ಲೋಬೋ, ಅಧ್ಯಕ್ಷರು, ಕ್ಯಾಥೊಲಿಕ್ ಸಭಾ,ಮಂಗಳೂರು ಪ್ರದೇಶ

      ಮಂಗಳೂರಿನಲ್ಲಿ ಕೋಮುದ್ವೇಷದ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಇವುಗಳು ಕಡಿಮೆಯಾಗಬೇಕೆಂಬ ನೆಲೆಯಲ್ಲಿ ಇಂತಹ ಒಂದು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಂಗಳೂರಿನಲ್ಲಿ ಇದಕ್ಕೆ ಉತ್ತಮ ಪ್ರತಿಕ್ರೀಯೆ ಸಿಕ್ಕಿದರೆ ಮುಂದೆ ಜಿಲ್ಲಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಮಾಡುವ ಯೋಜನೆಯಿದೆ. ಮಂಗಳೂರಿನಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆಯುತ್ತಿರುವ ಘಟನೆಗಳಿಂದ ಶಾಂತಿ ಪ್ರಿಯ ಮಂಗಳೂರಿನ ಜನರು ಸಾಕಷ್ಟು ನೊಂದಿದ್ದಾರೆ. ಈ ಕಾರ್ಯಕ್ರಮದ ಮೂಲಕ ಮುಂದೆ ಸೌಹಾರ್ದತೆದ ವಾತಾವರಣಕ್ಕೆ ಧಕ್ಕೆ ಬಾರದಂತಹ ಪರಿಸ್ಥಿತಿಯನ್ನು ನಿರ್ಮಿಸಬೇಕಾಗಿದೆ.

ಗಂಗಾಧರ ಕರ್ಕೇರ , ಅಧ್ಯಕ್ಷ, ದ.ಕ ಜಿಲ್ಲಾ ಮೊಗವೀರ ಮಹಾಜನ ಸಂಘ

    ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತಂದು ಯುವಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ.ಮತ್ತು ಮಾನವ ಹಕ್ಕುಗಳ ಬಗ್ಗೆ ಮಾತನಾಡಿದರೂ ದೇಶದ್ರೋಹ ಎಂದು ಬಿಂಬಿಸಲಾಗುತ್ತಿದೆ. ಜಿಲ್ಲೆಯ ಜನರಿಗೆ ಕೋಮುಸಂಘರ್ಷಗಳು, ಅಶಾಂತಿಯ ವಾತಾವರಣ ಬೇಕಾಗಿಲ್ಲ. ಇಲ್ಲಿನ ಜನರಿಗೆ ಬೇಕಾಗಿರುವುದು ಸೌಹಾರ್ದತೆ , ಸಹಬಾಳ್ವೆ. ಇದಕ್ಕಾಗಿ ಈ ಪ್ರಯತ್ನ ಮಾಡಲಾಗುತ್ತಿದೆ.

ರಘು ಎಕ್ಕಾರ್, ಮುಖಂಡರು, ದಸಂಸ, (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News