ಕೊಳಕು ನೀರಿನ ಸಮಸ್ಯೆ:ದಿಲ್ಲಿ ಪರಿಸರ ಕಾರ್ಯದರ್ಶಿಗೆ ಎನ್‌ಜಿಟಿ ಬುಲಾವ್

Update: 2016-09-04 14:02 GMT

ಹೊಸದಿಲ್ಲಿ,ಸೆ.4: ಪದೇ ಪದೇ ನಿರ್ದೇಶಗಳನ್ನು ನೀಡಿದ್ದರೂ ರಾಷ್ಟ್ರ ರಾಜಧಾನಿಯಲ್ಲಿನ ಮನೆಗಳಿಗೆ ಪೂರೈಸಲಾಗುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಈವರೆಗೂ ಒಂದೇ ಒಂದೇ ವರದಿಯು ಸಲ್ಲಿಕೆಯಾಗಿಲ್ಲ ಎನ್ನುವುದನ್ನು ಬೆಟ್ಟು ಮಾಡಿದ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತರ್ ಕುಮಾರ್ ನೇತೃತ್ವದ ಪೀಠವು, ಮುಂದಿನ ವಿಚಾರಣಾ ದಿನಾಂಕವಾದ ಸೆ.9ಂದು ವರದಿಯೊಂದಿಗೆ ತನ್ನೆದುರು ಹಾಜರಾಗುವಂತೆ ದಿಲ್ಲಿ ಪರಿಸರ ಇಲಾಖೆಯ ಕಾರ್ಯದರ್ಶಿಗೆ ತಾಕೀತು ಮಾಡಿದೆ.

ದಿಲ್ಲಿಯಲ್ಲಿನ ಕುಡಿಯುವ ನೀರಿನ ಪೂರೈಕೆಯ ಕೊಳವೆಗಳಲ್ಲಿ ಕೊಳಕು ನೀರು ಹರಿಯುತ್ತಿದೆ ಮತ್ತು ಕೊಳವೆಬಾವಿಗಳು ಮಲಿನ ನೀರನ್ನು ಮೇಲಕ್ಕೆತ್ತುತ್ತಿವೆ ಎಂದು ಕಳೆದ ವರ್ಷ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಎನ್‌ಜಿಟಿಯು ಈ ಬಗ್ಗೆ ಉತ್ತರಿಸುವಂತೆ ದಿಲ್ಲಿ ಸರಕಾರಕ್ಕೆ ಆದೇಶಿಸಿತ್ತು. ಬಳಿಕ ಪರಿಸರ ಕಾರ್ಯದರ್ಶಿಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ,ದಿಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ,ದಿಲ್ಲಿ ಜಲ ಮಂಡಳಿ ಮತ್ತು ಎಲ್ಲ ಮಹಾನಗರ ಪಾಲಿಕೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News