×
Ad

ಬೋಸ್ ವಿಮಾನ ಅಪಘಾತದಲ್ಲಿ ಮಡಿದಿಲ್ಲ: ಸೈನಿ

Update: 2016-09-04 23:02 IST

ರೂಪನಗರ, ಸೆ.4: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಥೈವಾನ್‌ನಲ್ಲಿ 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಡಿದಿದ್ದರು ಎಂದು ಲಂಡನ್ ಮೂಲದ ವೆಬ್‌ಸೈಟ್ ಉಲ್ಲೇಖಿಸಿರುವುದನ್ನು ಅಖಿಲ ಭಾರತ ಫಾರ್ವಡ್ ಬ್ಲಾಕ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಸೈನಿ ಅಲ್ಲಗಳೆದಿದ್ದಾರೆ. ಇದು ಮಹಾನ್ ಕ್ರಾಂತಿಕಾರಿ ನಾಯಕನ ವಿರುದ್ಧದ ಪಿತೂರಿಯ ಅಂಗ ಎಂದು ಅವರು ಕಿಡಿ ಕಾರಿದ್ದಾರೆ.

ನೇತಾಜಿ ಕಣ್ಮರೆ ಕುರಿತು ಬಹಿರಂಗಗೊಳಿಸಲಾದ ದಾಖಲೆಗಳು ತನ್ನ ಬಳಿ ಇವೆ ಎಂದು ವೆಬ್‌ಸೈಟ್ ಹೇಳಿಕೊಂಡಿರುವುದು ಕೂಡಾ ಸುಳ್ಳು ಎಂದು ಅವರು ಹೇಳಿದ್ದಾರೆ. ವೆಬ್‌ಸೈಟ್ ಉಲ್ಲೇಖಿಸಿರುವ ದಾಖಲೆಗಳು ವಾಸ್ತವವಾಗಿ, ಕಾನ್‌ಸ್ಪಿರೇಟರ್ಸ್‌, ಅಬ್ಡಕ್ಟರ್ಸ್‌ ಆ್ಯಂಡ್ ಕಿಲ್ಲರ್ಸ್‌ ಆಫ್ ನೇತಾಜಿ ಎಂಬ ಕೃತಿಯ ಪುಟಗಳು. ಇದು 24 ವರ್ಷ ಹಿಂದೆ ಬರೆಯಲ್ಪಟ್ಟು ಎಂದು ಸುಭಾಷ್ ಕ್ರಾಂತಿ ಮಂಚ್ ಮುಖ್ಯಸ್ಥರೂ ಆಗಿರುವ ಅವರು ಪ್ರತಿಪಾದಿಸಿದ್ದಾರೆ.

ನೇತಾಜಿ ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ಹಾಗೂ ನೇತಾಜಿ ಸಾವಿನ ಬಗ್ಗೆ ಜಪಾನ್ ನೀಡಿದ ಮಾಹಿತಿ ತಪ್ಪು. 1945ರ ಆಗಸ್ಟ್ 18ರಂದು ತೈವಾನ್‌ನ ತೈಹೊಕು ಎಂಬಲ್ಲಿ ಯಾವ ವಿಮಾನ ಅಪಘಾತವೂ ಸಂಭವಿಸಿಲ್ಲ ಎಂದು ತೈವಾನ್ ಭಾರತಕ್ಕೆ ಲಿಖಿತವಾಗಿ ಸ್ಪಷ್ಟನೆ ನೀಡಿದೆ. ಆದ್ದರಿಂದ ಅಂದು ನೇತಾಜಿ ಸಾಯುವ ಸಾಧ್ಯತೆಯೇ ಇಲ್ಲ ಎಂದು ಹೇಳಿದ್ದಾರೆ.

ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎನ್ನುವುದನ್ನು ನ್ಯಾಯಮೂರ್ತಿ ಮುಖರ್ಜಿ ಆಯೋಗ ಕೂಡಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ನೇತಾಜಿ ವಿರುದ್ಧದ ಪಿತೂರಿಯಲ್ಲಿ ಅವರ ಕುಟುಂಬದ ಕೆಲವರೂ ವೈಯಕ್ತಿಕ ಕಾರಣದಿಂದ ಹಾಗೂ ಪಟ್ಟಭದ್ರ ಹಿತಾಸಕ್ತಿಯಿಂದ ಸರಕಾರದ ಜತೆ ಕೈಜೋಡಿಸಿದ್ದಾರೆ ಎಂದು ಸೈನಿ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News