ಭಾರತ ಅತ್ಯಂತ ಶ್ರೀಮಂತ ದೇಶ, ಆದರೆ ಭಾರತೀಯರು ಬಡವರು!
ಹೊಸದಿಲ್ಲಿ, ಸೆ.4: ರಶ್ಯಾ ಹೊರತುಪಡಿಸಿದರೆ ಇಡೀ ವಿಶ್ವದಲ್ಲೇ ಅಧಿಕ ಅಸಮಾನತೆ ಇರುವ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ಭಾರತದ ಸಂಪತ್ತಿನ ಶೇ.50ರಷ್ಟು ಪಾಲು ಹತ್ತು ಲಕ್ಷ ಡಾಲರ್‌ಗಳಿಗಿಂತ ಅಧಿಕ ಸಂಪತ್ತು ಹೊಂದಿರುವ ಶ್ರೀಮಂತರ ಹಿಡಿತದಲ್ಲಿ ಇದೆ ಎನ್ನುವುದನ್ನು ವರದಿಯೊಂದು ಬಹಿರಂಗಪಡಿಸಿದೆ.
ನ್ಯೂ ವರ್ಲ್ಡ್ ವೆಲ್ತ್ ಸಂಸ್ಥೆ ನಡೆಸಿದ ಅಧ್ಯಯನ ಈ ಅಂಶವನ್ನು ಬಹಿರಂಗಗೊಳಿಸಿದೆ. ಭಾರತದ ಒಟ್ಟು ಸಂಪತ್ತಿನ ಶೇ.54ರಷ್ಟು ಭಾಗ ಮಿಲಿಯಾಧಿಪತಿಗಳ ಕೈಯಲ್ಲಿದೆ ಎಂದು ವರದಿ ಹೇಳಿದೆ. ವಿಶ್ವದ ಹತ್ತು ಅತ್ಯಂತ ಶ್ರೀಮಂತ ದೇಶಗಳ ಪೈಕಿ ಭಾರತವೂ ಸ್ಥಾನ ಪಡೆದಿದ್ದು, ಭಾರತದ ಒಟ್ಟು ಸಂಪತ್ತಿನ ವೌಲ್ಯ 5,600 ಶತಕೋಟಿ ಡಾಲರ್ ಎಂದು ಅಂದಾಜು ಮಾಡಲಾಗಿದೆ. ಆದರೆ ಸರಾಸರಿ ಗಣನೆಗೆ ತೆಗೆದುಕೊಂಡರೆ ಭಾರತೀಯರು ಬಡವರಾಗಿಯೇ ಇದ್ದಾರೆ ಎನ್ನುವುದು ವರದಿಯಿಂದ ತಿಳಿದುಬಂದಿದೆ.
ಜಾಗತಿಕ ಮಟ್ಟದಲ್ಲಿ ರಷ್ಯಾದಲ್ಲಿ ಮಿಲಿಯನೇರ್‌ಗಳ ಕೈಯಲ್ಲಿ ಶೇ.62ರಷ್ಟು ಸಂಪತ್ತು ಕ್ರೋಡೀಕರಣವಾಗಿದೆ. ಈ ಅಸಮಾನತೆಯನ್ನು ಅಳೆಯಲು ಸಂಸ್ಥೆ, ಅತ್ಯಧಿಕ ಸಂಪತ್ತು ಹೊಂದಿರುವ ವ್ಯಕ್ತಿಗಳ ಹಿಡಿತದಲ್ಲಿರುವ ಸಂಪತ್ತನ್ನು ಗಣನೆಗೆ ತೆಗೆದುಕೊಂಡಿದೆ. ಹೆಚ್ಚಿನ ಸಂಖ್ಯೆಯ ಮಿಲಿಯಾಧಿಪತಿಗಳಿದ್ದರೆ ಹೆಚ್ಚು ಅಸಮಾನತೆ ಹೊಂದಿದೆ ಎಂಬ ಅರ್ಥ. ಒಂದು ದೇಶದ ಸಂಪತ್ತಿನ ಅರ್ಧದಷ್ಟು ಪಾಲು ಮಿಲಿಯಾಧಿಪತಿಗಳೇ ಇದ್ದರೆ, ಅಲ್ಲಿ ಮಧ್ಯಮ ವರ್ಗ ಇರಲು ಸಾಧ್ಯವೇ ಇಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.
ಇನ್ನೊಂದೆಡೆ ಜಪಾನ್ ಅತ್ಯಂತ ಸಮಾನತೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಪಾನ್‌ನ ಮಿಲಿಯಾಧಿಪತಿಗಳು ಕೇವಲ ಶೇ.22ರಷ್ಟು ಸಂಪತ್ತಿನ ಮೇಲೆ ಮಾತ್ರ ಹಿಡಿತ ಹೊಂದಿದ್ದಾರೆ. ಆಸ್ಟ್ರೇಲಿಯದಲ್ಲಿ ಈ ಪ್ರಮಾಣ ಶೇ.28ರಷ್ಟಿದೆ. ಆದರೆ ಅಚ್ಚರಿ ಎಂದರೆ ಅಮೆರಿಕದಲ್ಲಿ ಶೇ.32 ರಷ್ಟು ಸಂಪತ್ತು ಮಾತ್ರ ಮಿಲಿಯನೇರ್‌ಗಳ ವಶದಲ್ಲಿದೆ. ಬಹುತೇಕ ಪತ್ರಿಕಾ ವರದಿಗಳು ಅಮೆರಿಕದಲ್ಲಿ ವ್ಯಾಪಕ ಪ್ರಮಾಣದ ಅಸಮಾನತೆ ಇದೆ ಎಂದು ವರದಿ ಮಾಡಿದ್ದವು. ಇಂಗ್ಲೆಂಡ್‌ನಲ್ಲಿ ಶೇ.35ರಷ್ಟು ಪಾಲು ಮಿಲಿಯನೇರ್‌ಗಳ ಬಳಿ ಇದೆ.
ಶತಕೋಟ್ಯಧಿಪತಿಗಳ ಸಂಪತ್ತನ್ನು ಗಣನೆಗೆ ತೆಗೆದುಕೊಂಡರೂ ರಶ್ಯಾ ಅಗ್ರಸ್ಥಾನಿಯಾಗಿದೆ. ದೇಶದ ಶೇ.26 ಪಾಲು ಸಂಪತ್ತು ಇವರ ಹಿಡಿತದಲ್ಲಿದೆ. ಜಪಾನ್‌ನಲ್ಲಿ ಈ ಪ್ರಮಾಣ ಶೇ.3ರಷ್ಟು ಮಾತ್ರ.
.............................................
ಕಾಶ್ಮೀರದಲ್ಲಿ ಸರ್ವಪಕ್ಷ ನಿಯೋಗ
ಶ್ರೀನಗರ, ಸೆ.4: ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮರು ಸ್ಥಾಪನೆಯ ಉದ್ದೇಶದೊಂದಿಗೆ ಗೃಹಸಚಿವ ರಾಜನಾಥ ಸಿಂಗ್ ನೇತೃತ್ವದ ಸರ್ವಪಕ್ಷ ನಿಯೋಗವು ಎರಡು ದಿನಗಳ ಭೇಟಿಗಾಗಿ ರವಿವಾರ ಇಲ್ಲಿಗೆ ಆಗಮಿಸಿದ್ದು, ಅದು ವಿವಿಧ ವರ್ಗಗಳ ಜನರೊಂದಿಗೆ ಸಂವಾದ ನಡೆಸಲಿದೆ.
ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯನ್ನು ಬಯಸುವ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಮಾತನಾಡಲು ನಾವು ಉದ್ದೇಶಿಸಿದ್ದೇವೆ ಎಂದು 30 ಸದಸ್ಯರ ನಿಯೋಗವು ದಿಲ್ಲಿಯಿಂದ ಹೊರಡುವ ಮುನ್ನ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಪರಿಹಾರ ಮಾರ್ಗವೊಂದನ್ನು ಕಂಡುಕೊಳ್ಳುವ ಆಶಯವನ್ನು ತಾವು ಹೊಂದಿರುವುದಾಗಿ ನಾಯಕರು ಹೇಳಿದರು.
ಪ್ರತಿಯೊಬ್ಬರ ಅಹವಾಲನ್ನೂ ಆಲಿಸಲು ನಿಯೋಗವು ಸಿದ್ಧವಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಝಾದ್ ಅವರು ತಿಳಿಸಿದರು.
ನಿಯೋಗದ ಭೇಟಿಯಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಲಾಭವಾಗಲಿದೆ ಎಂದ ಅವರು, ಪ್ರತಿಯೊಬ್ಬರೂ ರಾಜ್ಯದಲ್ಲಿ ಶಾಂತಿಯನ್ನು ಬಯಸುತ್ತಿದ್ದಾರೆ ಎಂದರು.
ನಿಯೋಗವು ಎರಡು ತಿಂಗಳ ಹಿಂದೆಯೇ ಭೇಟಿ ನೀಡಬೇಕಾಗಿತ್ತು. ಆದರೂ ನಾವು ಬದಲಾವಣೆ ಯೊಂದನ್ನು ತರುತ್ತೇವೆ ಎಂದು ಈಗಲೂ ಆಶಿಸೋಣ ಎಂದು ನಿಯೋಗದ ಇನ್ನೋರ್ವ ಸದಸ್ಯ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹೇಳಿದರು.