ಸರ್ವಪಕ್ಷ ನಿಯೋಗದೊಂದಿಗೆ ಮಾತುಕತೆ ನಿರುಪಯುಕ್ತ: ಪ್ರತ್ಯೇಕತಾವಾದಿಗಳು
ಶ್ರೀನಗರ, ಸೆ.4: ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿರುವ ಸರ್ವಪಕ್ಷ ನಿಯೋಗದೊಂದಿಗೆ ಮಾತುಕತೆಯು ಮುಖ್ಯ ವಿವಾದವನ್ನು ಬಗೆಹರಿಸಲು ಪಾರದರ್ಶಕ,ಅಜೆಂಡಾ ಆಧಾರಿತ ಮಾತುಕತೆಗೆ ಪರ್ಯಾಯವಾಗದು ಎಂದು ಪ್ರತ್ಯೇಕತಾವಾದಿ ನಾಯಕರು ರವಿವಾರ ಇಲ್ಲಿ ಹೇಳಿದ್ದಾರೆ. ಸರ್ವಪಕ್ಷ ನಿಯೋಗವನ್ನು ಭೇಟಿಯಾಗುವಂತೆ ರಾಜ್ಯದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಶನಿವಾರ ಈ ನಾಯಕರನ್ನು ಆಹ್ವಾನಿಸಿದ್ದರು.
ಸ್ಪಷ್ಟ ಕಾರ್ಯಸೂಚಿಯ ಕುರಿತು ಯಾವುದೇ ಮಾತುಕತೆಯ ಬಗ್ಗೆ ತನ್ನ ಅಧಿಕಾರವೇನು ಎನ್ನುವುದನ್ನು ಹೇದ ನಿಯೋಗದೊಂದಿಗೆ ಮಾತುಕತೆಯಿಂದ ಸಾಧಿಸುವುದೇನೂ ಇಲ್ಲ ಎಂದು ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಗೀಲಾನಿ, ಮಿರ್ವೈಝ್ ಉಮರ್ ಫಾರೂಕ್ ಮತ್ತು ಮುಹಮ್ಮದ್ ಯಾಸ್ಮಿನ್ ಮಲಿಕ್ ಅವರು ಇಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸದೀಯ ನಿಯೋಗದ ಮೂಲಕ ಬಿಕ್ಕಟ್ಟನ್ನು ಬಗೆಹರಿಸುವ ಎರಡನೆ ದರ್ಜೆಯ ಈ ಪದ್ಧತಿ ಗಳು ಮುಖ್ಯ ವಿವಾದವನ್ನು ಬಗೆ ಹರಿಸಲು ಅಜೆಂಡಾ ಆಧಾರಿತ ಪಾರದರ್ಶಕವಾದ, ಪ್ರಾಮಾಣಿಕ ಮಾತುಕತೆಗಳ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಇದು ಮೊದಲಿನಿಂದಲೂ ನಾವು ತಳೆದಿರುವ ನಿಲುವು ಆಗಿದೆ ಮತ್ತು ಇದನ್ನು ನಾವು ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಿಗೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.