ಲಾತೂರ್: ನೀರು ಅಪವ್ಯಯ ಮಾಡಿದ ಅಧಿಕಾರಿಗಳ ವೇತನ ಭಡ್ತಿಗೆ ಕತ್ತರಿ
ಔರಂಗಾಬಾದ್, ಸೆ.4: ಕಾದು ಕೆಂಡವಾಗಿದ್ದ ನಗರದಲ್ಲಿ ನೀರು ಅಪವ್ಯಯ ಮಾಡಿದ ಆರೋಪ ದಲ್ಲಿ ಕ್ಲಾಸ್ ವನ್ ಅಧಿಕಾರಿಯೊಬ್ಬರು ಸೇರಿದಂತೆ ಮೂವರ ವಾರ್ಷಿಕ ವೇತನವನ್ನು ಕಡಿತಗೊಳಿಸಿದ ಘಟನೆ ನಡೆದಿದೆ.
ಲಾತೂರು ಮಹಾನಗರ ಪಾಲಿಕೆಯ ಆರು ಓವರ್‌ಹೆಡ್ ಟ್ಯಾಂಕ್‌ಗಳಿಂದ ಆಗಸ್ಟ್ 21ರಂದು ಸುಮಾರು 1.5 ಲಕ್ಷ ಲೀಟರ್ ನೀರು ವ್ಯರ್ಥವಾಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಈ ಅಪರೂಪದ ಕ್ರಮ ಜರಗಿಸಲಾಗಿದೆ. 20 ನಿಮಿಷಗಳ ಕಾಲ ಈ ಟ್ಯಾಂಕ್‌ಗಳು ತುಂಬಿ ಹರಿದಿವೆ. ಮೂವರೂ ಅಧಿಕಾರಿಗಳು ಲಾತೂರ್ ಪಾಲಿಕೆಯ ಅಧಿಕಾರಿಗಳು.
ಜಿಲ್ಲಾಧಿಕಾರಿ ಹಾಗೂ ಪಾಲಿಕೆಯ ಆಡಳಿತಾಧಿಕಾರಿ ಪಾಂಡುರಂಗ ಪೋಳೆ, ಈ ಬಗ್ಗೆ ತನಿಖೆ ಕೈಗೊಂಡ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ. ಕ್ಲಾಸ್ ವನ್ ಅಧಿಕಾರಿ ಈ ಬಗ್ಗೆ ಜಿಲ್ಲಾಧಿಕಾರಿಗೆ ನೀಡಿದ ಸ್ಪಷ್ಟನೆಯಲ್ಲಿ, ಇದಕ್ಕೆ ಇಬ್ಬರು ಅಧೀನ ಅಧಿಕಾರಿಗಳು ಕಾರಣ ಎಂದು ಹೇಳಿದ್ದರು. ಆದರೆ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಮೂವರೂ ಇದಕ್ಕೆ ಹೊಣೆ ಗಾರರು ಎಂದು ಜಿಲ್ಲಾಧಿಕಾರಿ ನಿರ್ಧಾರಕ್ಕೆ ಬಂದಿದ್ದಾರೆ.
ಸುಮಾರು ಆರು ತಿಂಗಳ ಬಳಿಕ ಲಾತೂರ್ ನಿವಾಸಿಗಳು ಕೊಳಾಯಿ ನೀರು ಪಡೆಯಲು ಆರಂಭಿಸಿದ್ದರು. ಅದುವರೆಗೆ ರೈಲಿನಲ್ಲಿ ಪಶ್ಚಿಮ ಮಹಾರಾಷ್ಟ್ರದ ಮೀರಜ್‌ನಿಂದ 25 ಲಕ್ಷ ಲೀಟರ್ ನೀರನ್ನು ಪ್ರತಿ ದಿನ ತರಲಾಗುತ್ತಿತ್ತು. ಈಗ ಕೂಡಾ 15 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ.
ಲಾತೂರ್ ಪಾಲಿಕೆಯು ನಾಗಝರಿ ಹಾಗೂ ಸಾಯಿ ಅಣೆಕಟ್ಟುಗಳಿಂದ ನೀರನ್ನು ಎತ್ತಿ, ನಗರಕ್ಕೆ ಪೂರೈಸುತ್ತಿದೆ. ಆರು ಓವರ್‌ಹೆಡ್ ಟ್ಯಾಂಕ್‌ಗಳಲ್ಲಿ ಇದನ್ನು ಸಂಗ್ರಹಿಸಿ ವಿತರಿಸಲಾಗುತ್ತದೆ. ವ್ಯರ್ಥವಾದ ನೀರು ನೂರಾರು ಮಂದಿಯ ಬಾಯಾರಿಕೆ ಇಂಗಿಸುತ್ತಿತ್ತು. ಈ ಕ್ರಮ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ ಎಂದು ಜಿಲ್ಲಾಡಳಿತ ಹೇಳಿದೆ.