ಬ್ರಿಟನ್‌ಗೆ ಸಂಕಷ್ಟದ ದಿನಗಳು ಕಾದಿವೆ
ಲಂಡನ್,ಸೆ.4: ಯುರೋಪ್ ಒಕ್ಕೂಟದಿಂದ ಬ್ರಿಟನ್‌ನ ನಿರ್ಗಮನವು, ‘ಸುಗಮ ಪಯಣ’ವಾಗಿರದು ಎಂದು ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಹೇಳಿದ್ದಾರೆ ಹಾಗೂ ದೇಶವು ಸಂಕಷ್ಟ ದಿನ ಗಳನ್ನು ಎದುರಿಸುವ ಪರಿಸ್ಥಿತಿ ಬರಬಹುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
‘‘ಬ್ರೆಕ್ಸಿಟ್‌ನ ಆನಂತರದ ದಿನಗಳು ಬ್ರಿಟನ್‌ನ ಪಾಲಿಗೆ ಸುಗಮ ಪ್ರಯಾಣವಾಗಲಿವೆಯೆಂದು ನಾನು ಭಾವಿಸಲಾರೆ. ನಮಗೆ ಕಷ್ಟಕರವಾದ ದಿನಗಳು ಎದುರಾಗಲಿವೆ. ಆದಾಗ್ಯೂ ನಾನು ಆಶಾವಾದಿಯಾಗಿದ್ದೇನೆ’’ ಎಂದು ತೆರೇಸಾ ಮೇ ತಿಳಿಸಿದ್ದಾರೆ.
ಜಿ-20 ಸಮಾವೇಶದಲ್ಲಿ ಭಾಗವಹಿಸಲು ರವಿವಾರ ಚೀನಾಕ್ಕೆ ತೆರಳುವ ಮುನ್ನ ಲಂಡನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬ್ರಿಟನ್‌ನ ನಿರ್ಗಮನಕ್ಕೆ ಸಂಬಂಧಿಸಿ 2017ರವರೆಗೆ ಯುರೋಪ್ ಒಕ್ಕೂಟದ ರಾಷ್ಟ್ರಗಳ ನಡುವೆ ಔಪಚಾರಿಕ ಮಾತುಕತೆ ನಡೆಯುವ ಸಾಧ್ಯತೆಗಳಿಲ್ಲ ಎಂದು ಅಭಿಪ್ರಾಯಿಸಿದರು. ಆದರೆ ನಿರ್ಗಮನ ಪ್ರಕ್ರಿಯೆಯು ದೀರ್ಘಕಾಲದವರೆಗೆ ವಿಳಂಬಗೊಳ್ಳದೆಂದವರು ಭರವಸೆ ವ್ಯಕ್ತಪಡಿಸಿದರು. ಬ್ರೆಕ್ಸಿಟ್ ಹಿನ್ನೆಲೆಯಲ್ಲಿ ದೇಶದಲ್ಲಿ ದಿಢೀರ್ ಚುನಾವಣೆಯನ್ನು ಘೋಷಿಸುವ ಇಚ್ಛೆ ತನಗಿಲ್ಲವೆಂದು ತೆರೇಸಾ ಸ್ಪಷ್ಟಪಡಿಸಿದರು. ಬ್ರಿಟನ್ ಒಂದು ಸ್ವತಂತ್ರ ರಾಷ್ಟ್ರವಾಗಿ, ಜಗತ್ತಿನಲ್ಲಿ ತನ್ನದೇ ಆದ ದಾರಿಯಲ್ಲಿ ಸಾಗಲು ಬಯಸುತ್ತಿದೆ. ಆದರೆ ಇತರ ಯುರೋಪ್ ಒಕ್ಕೂಟದ ರಾಷ್ಟ್ರಗಳು ತಮ್ಮಲ್ಲಿ ನೆಲೆಸಿರುವ ಬ್ರಿಟಿಷ್ ನಾಗರಿಕರ ಸ್ಥಾನಮಾನವನ್ನು ಖಾತರಿಪಡಿಸಬೇಕಾಗಿದೆ. ಹಾಗೆಯೇ ಬ್ರಿಟನ್ ಕೂಡಾ ತನ್ನ ನೆಲದಲ್ಲಿ ವಾಸಿಸುವ ಯುರೋಪ್ ಒಕ್ಕೂಟದ ನಾಗರಿಕರ ಸ್ಥಾನಮಾನವನ್ನು ಖಚಿತಪಡಿಸಲಿದೆಯೆಂದರು.