ವಿಮಾನ ನಿಲ್ದಾಣದಲ್ಲಿ ಅವಮಾನ: ಚೀನಾಕ್ಕೆ ಚೀನಾದಲ್ಲೇ ತಿರುಗೇಟು ನೀಡಿದ ಒಬಾಮ
ಹ್ಯಾಂಗ್ ರೌ, ಸೆ.5: ಚೀನಾದ ಹ್ಯಾಂಗ್‌ರೌ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಬಂದಿಳಿದಾಗ ಅಲ್ಲಿ ಆ ಬಗ್ಗೆ ವರದಿ ಮಾಡಲು ಕಾದಿದ್ದ ಅಮೆರಿಕನ್ ಪತ್ರಕರ್ತರಿಗೆ ಸರಿಯಾದ ಜಾಗ ಸಿಗುವಂತೆ ನೋಡಿಕೊಳ್ಳುತ್ತಿದ್ದ ವೈಟ್ ಹೌಸ್ ಸಿಬ್ಬಂದಿ ಮೇಲೆ ಚೀನಾದ ಅಧಿಕಾರಿಗಳು ರೇಗಿದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
‘‘ಇದು ನಮ್ಮ ದೇಶ, ಇದು ನಮ್ಮ ವಿಮಾನ ನಿಲ್ದಾಣ’’ ಎಂದು ಚೀನಾದ ಅಧಿಕಾರಿಯೊಬ್ಬ ಅಮೆರಿಕನ್ ಪತ್ರಕರ್ತರತ್ತ ನೋಡಿ ಬೊಬ್ಬಿಟ್ಟಿದ್ದ ಎಂದು ವರದಿಯಾಗಿದೆ. ಚೀನಾ ಸರಕಾರವು ಮಾಧ್ಯಮವನ್ನು ಹತ್ತಿಕ್ಕುವಲ್ಲಿ ಎತ್ತಿದ ಕೈಯಾಗಿರುವುದರಿಂದ ಇಂತಹ ಘಟನೆಗಳು ಚೀನಾದಲ್ಲಿ ಸಾಮಾನ್ಯವಾಗಿದ್ದರೂ ಒಬಾಮ ಹಾಗು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ನಡುವೆ ಮಾತುಕತೆ ನಡೆಯುವ ಮೊದಲು ನಡೆದ ಈ ಘಟನೆ ಅಮೆರಿಕಾದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ್ತಿ ಸೂಸನ್ ರೈಸ್ ಮತ್ತಿತರ ಅಧಿಕಾರಿಗಳಿಗೆ ಮುಜುಗರ ತಂದು ಅವಮಾನವುಂಟು ಮಾಡಿತ್ತಾದರೂ ಈ ಅವಮಾನಕ್ಕೆ ಒಬಾಮ ಚೀನಾಕ್ಕೆ ಅದರ ನೆಲದಲ್ಲೇ ನಯವಾಗಿ ತಿರುಗೇಟು ನೀಡಿದ್ದಾರೆ.
ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ಅವರೊಂದಿಗೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಒಬಾಮ ಇಂತಹ ಘಟನೆ ಚೀನದಲ್ಲಿ ನಡೆಯುತ್ತಿರುವುದು ಪ್ರಥಮ ಬಾರಿಯಲ್ಲ ಎಂದಿದ್ದಾರೆ.
‘‘ನಾವು ಮಾಡುತ್ತಿರುವ ಕೆಲಸದ ಕುರಿತಾಗಿ ಮಾಧ್ಯಮವು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ನಾವಂದುಕೊಂಡಿದ್ದೇವೆ’’ಎಂದು ಹೇಳಿದ ಒಬಾಮ ಮತ್ತೆ ಲಘು ಧಾಟಿಯಲ್ಲಿ ‘‘ನಮ್ಮ ವೈಟ್ ಹೌಸ್ ಪಡೆ ಆಗಮಿಸುವಾಗ ಯಾವುದೇ ದೇಶಕ್ಕೂ ಬೆದರಿಕೆಯೊಡ್ಡಿದಂತೆ ಕಾಣಬಹುದು’’ ಎಂದರು.
‘‘ನಮ್ಮಲ್ಲಿ ಬಹಳಷ್ಟು ವಿಮಾನಗಳಿಗೆ, ಹೆಲಿಕಾಪ್ಟರ್‌ಗಳಿವೆ, ಕಾರುಗಳಿವೆ ಹಾಗೂ ಬಹಳ ಜನರಿದ್ದಾರೆ. ನಿಮಗೆ ಗೊತ್ತಿರಬೇಕು, ನೀವು ಅತಿಥೇಯ ರಾಷ್ಟ್ರವಾಗಿದ್ದರೆ ಕೆಲವೊಮ್ಮೆ ಇದು ಸ್ವಲ್ಪ ಅತಿಯಾಯಿತೆಂದು ನಿಮಗನಿಸಬಹುದು’’ಎಂದು ಒಬಾಮ ಹೇಳಿದರು.