ಬಂಟ್ಸ್ ಹಾಸ್ಟೆಲ್‌ನಲ್ಲಿ ಗಣೇಶೋತ್ಸವ, ತೆನೆ ಹಬ್ಬದ ಸಂಭ್ರಮ

Update: 2016-09-05 08:16 GMT

ಮಂಗಳೂರು, ಸೆ.5: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ 13ನೆ ವರ್ಷದ ಗಣೇಶೋತ್ಸವ ಮತ್ತು ತೆನೆ ಹಬ್ಬ ಕಾರ್ಯಕ್ರಮ ಇಂದು ನಡೆಯಿತು.
 ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಧ್ವಜಾರೋಹಣ ಸ್ಥಳದಿಂದ ತೆನೆ ಹೊತ್ತು ವೇದಿಕೆಯತ್ತ ಆಗಮಿಸಿದರು. ಅನಂತರ ಧಾರ್ಮಿಕ ಕಾರ್ಯಗಳು ನೆರವೇರಿದವು.

 ಬಳಿಕ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಮಾಲಾಡಿ ಅಜಿತ್ ಕುಮಾರ್ ರೈ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತಿರುವ ಧಾರ್ಮಿಕ ನಿಂದನೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು ನೋವು ತಂದಿದೆ. ಯಾರಿಗೂ ಯಾವ ಧರ್ಮವನ್ನೂ ನಿಂದಿಸುವ ಹಕ್ಕಿಲ್ಲ. ಆದರೆ ಕೆಲವರಿಂದ ಇಂತಹ ಘಟನೆಗಳು ತಿಳಿದೊ ಅಥವಾ ತಿಳಿಯದೆಯೋ ಸಂಭವಿಸುತ್ತದೆ. ಅಂತಹ ವ್ಯಕ್ತಿಗಳಿಗೆ ದೇವರು ಸದ್ಬುದ್ಧಿ ನೀಡಲೆಂದು ನಾವೆಲ್ಲೂ ಭಗವಂತನಲ್ಲಿ ಪ್ರಾರ್ಥಿಸೋಣ ಎಂದರು.
ಕರ್ನಲ್ ರಮೇಶ್ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಬಂಟ ಸಮುದಾಯವು ಚೌತಿ ಹಬ್ಬವನ್ನು ಬಹಳ ಸಡಗರಿಂದ ಆಚರಿಸುತ್ತಿದ್ದು, ಈ ಹಬ್ಬ ಬಂಟ ಸಮುದಾಯವನ್ನು ಒಟ್ಟುಗೂಡಿಸುವಲ್ಲಿ ಸಹಕರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ  ವತ್ಸಲಾ ಆರ್. ಶೆಟ್ಟಿ, ಖ್ಯಾತ ಹೃದ್ರೋಗ ತಜ್ಞ ಡಾ.ಎ.ವಿ.ಶೆಟ್ಟಿ, ಚಂದ್ರಲೇಖಾ ಎ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.  ರವಿರಾಜ್ ಶೆಟ್ಟಿ ಕೊಳಂಬೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News