ಲೈಂಗಿಕಾರೋಪ: ಭಾರತ ಮೂಲದ ಬ್ರಿಟನ್ ಸಂಸದ ರಾಜೀನಾಮೆ
ಲಂಡನ್, ಸೆ.5: ತನ್ನ ವಿರುದ್ಧ ಲೈಂಗಿಕಾರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತ ಮೂಲದ ಬ್ರಿಟಿಷ್ ಸಂಸದ ರಾಜಿನಾಮೆ ನೀಡಿದ್ದಾರೆ. 1987ರಿಂದ ಲಿಸಸ್ಟರ್‌ನಿಂದ ಲೇಬರ್ ಪಾರ್ಟಿಯ ಸಂಸದರಾಗಿರುವ ಜಯಂತ್‌ವಾಸ್ ಬ್ರಿಟಿಷ್ ಸಾರ್ವಜನಿಕ ಗೃಹ ಖಾತೆಯ ಆಯ್ಕೆ ಸಮಿತಿ ಅಧ್ಯಕ್ಷನ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ವಿರುದ್ಧ ಪುರುಷ ಲೈಂಗಿಕ ಕಾರ್ಯಕರ್ತರಿಗೆ ಹಣ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂಡೆ ಮಿರರ್ ಪತ್ರಿಕೆ ವರದಿ ಮಾಡಿದೆ.
ಕಳೆದ ಆಗಸ್ಟ್‌ನಲ್ಲಿ ಒಂದು ದಿನ ಸಂಜೆಯ ವೇಳೆ ಲಂಡನ್‌ನ ಪ್ಲಾಟ್‌ಗೆ ಬಂದಿದ್ದ ಇಬ್ಬರು ಪುರುಷ ಲೈಂಗಿಕ ಕಾರ್ಯಕರ್ತರಿಗೆ ಸಂಸದರು ಹಣ ನೀಡಿದ್ದಾರೆ ಎಂದು ಪತ್ರಿಕೆ ಬಹಿರಂಗಪಡಿಸಿತ್ತು. ಇವರ ಜೊತೆ ಸಂಸದ ಪೋಪ್ಪರ್ಸ್ ಎಂಬ ಮಾದಕದ್ರವ್ಯವನ್ನು ಸೇವಿಸುವುದರ ಕುರಿತು ಮಾತುಕತೆಯಾಡಿದ್ದಾರೆ ಕ್ಲಾಸ್ ಎ ಮಾದಕ ವಸ್ತುವಿಗಾಗಿ ಹಣ ನೀಡುವ ಭರವಸೆ ನೀಡಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದ್ದು, ಇದಕ್ಕೆ ಪುರಾವೆಯಾಗಿ ಪತ್ರಿಕೆ ಕೆಲವು ಫೋಟೊಗಳನ್ನು ಪ್ರಕಟಿಸಿದೆ.
ಪತ್ರಿಕೆ ತನ್ನ ವಿರುದ್ಧ ವ್ಯಕ್ತಿಗತ ಆಕ್ಷೇಪ ನಡೆಸಿದೆ. ತನ್ನ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ. 59 ವರ್ಷ ವಯಸ್ಸಿನ ಜಯಂತ್ ಎರಡು ಮಕ್ಕಳ ತಂದೆಯಾಗಿದ್ದಾರೆ. ಗೋವ ಮೂಲದ ದಂಪತಿಗೆ ಯಮನ್‌ನ ಏಡನ್‌ನಲ್ಲಿ ಅವರು ಜನಿಸಿದ್ದರು. 2007ರಿಂದ ಗೃಹ ಖಾತೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಟೋನಿ ಬ್ಲೇರ್ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಅವರ ಸಹೋದರಿ ವಲೇರಿ ಕೂಡಾ ವಾಲ್ಸಲ್ ಸೌತ್‌ನ ಸಂಸದೆಯಾಗಿದ್ದಾರೆಂದು ವರದಿ ತಿಳಿಸಿದೆ.