ವಿದ್ಯಾರ್ಥಿಗಳಿಂದ ಮೊಬೈಲ್ ' ಗಾಂಜಾ' ಅಪ್ ಗ್ರೇಡ್ !
ಇಡುಕ್ಕಿ, ಸೆ.5: ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವವರು ಪೊಲೀಸರ ದಾರಿ ತಪ್ಪಿಸಲು ಪರ್ಯಾಯ ದಾರಿ ಕಂಡು ಹಿಡಿದಿದ್ದಾರೆ. ಮೊಬೈಲ್‌ನಲ್ಲಿ ಗಾಂಜಾ ಸಾಗಿಸುವುದು ಈಗ ನೂತನ ವಿಧಾನ. ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್‌ನ ಚೆಕ್‌ಪೋಸ್ಟ್ ನಲ್ಲಿ ಶನಿವಾರ ರಾತ್ರಿ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಕೇರಳ ಎಕ್ಸೈಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ತಪಾಸಣೆ ನಡೆಸಿದಾಗ ಅವರ ಮೊಬೈಲ್ ಫೋನ್ ಒಳಗಡೆ ಗಾಂಜಾ ಪತ್ತೆಯಾಗಿದೆ.
ಮೂವರು ವಿದ್ಯಾರ್ಥಿಗಳಲ್ಲಿ ಇಬ್ಬರು ಅಪ್ರಾಪ್ತರು. ಇವರು ಮೊಬೈಲ್‌ನಲ್ಲಿ ಅಡಗಿಸಿಟ್ಟಿದ್ದ ೨೩೦ ಗ್ರಾಂ ಗಾಂಜಾವನ್ನು ವಂಡಿಪೆರಿಯಾರ್‌ನ ಎಕ್ಸೈಸ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
" ಡ್ರಗ್ಸ್ ಸಾಗಾಟಕ್ಕೆ ಬಳಸುತ್ತಿದ್ದ ಕೆಲವು ಟಾಬ್ಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಸಿಕ್ಕಿ ಬಿದ್ದಿರುವ ಮೂವರು ಆರೋಪಿಗಳಲ್ಲಿ ಒಬ್ಬನಿಗೆ ಹದಿನೆಂಟು ವರ್ಷ. ಇನ್ನಿಬ್ಬರು ಅಪ್ರಾಪ್ತರು.ಇವರು ಐಟಿಐ ವಿದ್ಯಾರ್ಥಿಗಳು” ಎಂದು ಎಕ್ಸೈಸ್ ನಿರೀಕ್ಷಕರಾದ ಸುನೀಲ್ ರಾಜ್ ತಿಳಿಸಿದ್ದಾರೆ.
" ಕಂಬಮ್‌ನಿಂದ ಗಾಂಜಾ ಮತ್ತಿತರ ಮಾದಕ ಪದಾರ್ಥಗಳನ್ನು ಖರೀದಿಸಿರುವುದಾಗಿ ಬಂಧಿತ ವಿದ್ಯಾರ್ಥಿಗಳು ಬಾಯಿ ಬಿಟ್ಟಿದ್ದಾರೆ. ಕಂಬಮ್ ತಮಿಳುನಾಡಿಗೆ ಸೇರಿರುವ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸುನೀಲ್ ರಾಜ್ ಮಾಹಿತಿ ನೀಡಿದ್ದಾರೆ.
ಚೆಕ್ ಪೋಸ್ಟ್‌ನಲ್ಲಿ ತನಿಖೆಯ ವೇಳೆ ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ವರ್ತಿಸಿದರು.ಅವರಲ್ಲಿದ್ದ ಕೆಟ್ಟು ಹೋಗಿರುವ ಮೊಬೈಲ್ ಫೋನ್‌ಗಳನ್ನು ಪರಿಶೋಧಿಸಿದಾಗ ಅದರ ಒಳಗೆ ಗಾಂಜಾ ಪತ್ತೆಯಾಗಿದೆ” ಎಂದು ಅವರು ಹೇಳಿದ್ದಾರೆ.
ಪೊಲೀಸರನ್ನು ವಂಚಿಸಿ ಡ್ರಗ್ ಸಾಗಿಸಲು ಕಳ್ಳ ಸಾಗಾಣಿಕೆ ಮಾಡುವವರು ಇದೀಗ ಮೊಬೈಲ್ ಮೂಲಕ ಹೊಸ ವಿಧಾನವನ್ನು ಕಂಡು ಹಿಡಿದಿದ್ದಾರೆ.
Courtesy : thenewsminute.com