ಮತ್ತೆ ಬಾಂಡ್ ಆಗಲು ಡೇನಿಯಲ್ ನೀಡಿದ ಆಫರ್ ಎಷ್ಟು ಕೋಟಿಯದ್ದು ಎಂದು ನೀವು ಊಹಿಸಲೂ ಸಾಧ್ಯವಿಲ್ಲ !
ಲಂಡನ್, ಸೆ. 5 : ಜೇಮ್ಸ್ ಬಾಂಡ್ ಚಿತ್ರದ ಮುಖ್ಯ ಪಾತ್ರಧಾರಿ ಕುರಿತು ಬಹುಶ: ಈವರೆಗೆ ಇಷ್ಟು ಚರ್ಚೆ, ಗಾಸಿಪ್ ಹುಟ್ಟಿರಲೇ ಇಲ್ಲ.
ಕಳೆದ ನಾಲ್ಕು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಮಿಂಚಿ ಭಾರೀ ಯಶಸ್ಸು ಪಡೆದಿರುವ ಡೇನಿಯಲ್ ಕ್ರೇಗ್ ಸರಣಿಯ ಕೊನೆಯ ಚಿತ್ರ ಸ್ಪೆಕ್ಟರ್ ಮುಗಿದ ಕೂಡಲೇ ಇನ್ನು ಮುಂದೆ ತಾನು ಜೇಮ್ಸ್ ಬಾಂಡ್ ಆಗುವುದಿಲ್ಲ ಎಂದು ಖಂಡತುಂಡವಾಗಿ ಹೇಳಿಬಿಟ್ಟಿದ್ದರು.
ಆದರೆ ತಮ್ಮ ಅತ್ಯಂತ ಯಶಸ್ವಿ ನಟನನ್ನು ಈ ಹಂತದಲ್ಲಿ ಬಿಟ್ಟು ಕೊಡಲು ಬಾಂಡ್ ಚಿತ್ರ ನಿರ್ಮಿಸುವ ಸೋನಿ ಸಂಸ್ಥೆ ತಯಾರಿಲ್ಲ ಎಂದು ಮೂಲಗಳು ತಿಳಿಸಿವೆ. ಈಗಿರುವ ವದಂತಿ ಸತ್ಯ ಎಂದಾದರೆ ಮುಂದಿನ ಎರಡು ಬಾಂಡ್ ಚಿತ್ರಗಳಲ್ಲಿ ನಟಿಸಲು ಡೇನಿಯಲ್ ಗೆ 150 ಮಿಲಿಯನ್ ಡಾಲರ್ ( ಅಂದರೆ ಸಾವಿರ ಕೋಟಿ ರೂಪಾಯಿ ! ) ನೀಡಲು ಮುಂದಾಗಿದ್ದಾರೆ. ಅಂದರೆ ಡೇನಿಯಲ್ ಜಗತ್ತಿನಲ್ಲೇ ಅತ್ಯಂತ ದುಬಾರಿ ನಟ ಎಂಬ ಕೀರ್ತಿಗೆ ಪಾತ್ರರಾಗುತ್ತಾರೆ.
ಡೇನಿಯಲ್ ಕ್ರೇಗ್ ವಿಶ್ವದ ಗಮನ ಸೆಳೆದಿದ್ದು ಬಾಂಡ್ ಚಿತ್ರದ ಮೂಲಕವೇ. ಆದರೂ ಇನ್ನು ತಾನು ನಿಮಗೆ ಅಲಭ್ಯ ಎಂದು ಹೇಳಿ ಡೇನಿಯಲ್ ಚೌಕಾಸಿಗೆ ಇಳಿದಿದ್ದರು ಎಂದು ಹೇಳಲಾಗಿದೆ. ಜೊತೆಗೆ ಬೇರೆ ಎರಡು ಚಿತ್ರಗಳನ್ನು ಕೂಡ ಒಪ್ಪಿಕೊಳ್ಳುವ ಮೂಲಕ ಸೋನಿಗೆ ಬಿಸಿ ಮುಟ್ಟಿಸಿದ್ದರು. ತಾನು ಕಡಿಮೆ ಇಲ್ಲ ಎಂಬಂತೆ ಚಿತ್ರ ನಿರ್ಮಾಣ ಸಂಸ್ಥೆ ಡೇನಿಯಲ್ ಬದಲು ಬೇರೆ ನಟರನ್ನು ನಾವು ಆಯ್ಕೆ ಮಾಡಲು ಪ್ರಕ್ರಿಯೆ ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದರು. ಇದ್ರಿಸ್ ಎಲ್ಬ , ಏಡನ್ ಟರ್ನರ್ , ಟಾಮ್ ಹಿಡ್ಲ್ ಸ್ಟನ್ ಮುಂತಾದ ನಟರ ಹೆಸರು ಕೂಡ ಕೇಳಿ ಬಂತು.
ಆದರೆ ಸದ್ಯದ ಮಟ್ಟಿಗೆ ಡೇನಿಯಲ್ ಬಿಟ್ಟರೆ ನಮಗೆ ಬೇರೆ ಅತ್ಯುತ್ತಮ ಆಯ್ಕೆ ಇಲ್ಲ ಎಂದೇ ಮನಗಂಡಿರುವ ನಿರ್ಮಾಣ ಸಂಸ್ಥೆ ಹೇಗಾದರೂ ಅವರನ್ನು ಒಪ್ಪಿಸಲು ಈ ಭಯಂಕರ ಮೊತ್ತದ ಆಮಿಷ ಮುಂದಿಟ್ಟಿದೆ ಎಂದು ತಿಳಿದು ಬಂದಿದೆ. ಈಗ ಡೇನಿಯಲ್ ಜೊತೆ ಎರಡು ಚಿತ್ರಗಳನ್ನು ಒಂದರ ಹಿಂದೊಂದರಂತೆ ಮಾಡುವುದು , ಅಷ್ಟರಲ್ಲಿ ಸರಿಯಾದ ಹೊಸ ನಟನನ್ನು ಹುಡುಕಿಕೊಳ್ಳುವುದು ನಿರ್ಮಾಣ ಸಂಸ್ಥೆಯ ಮುಂದಿರುವ ಆಲೋಚನೆ ಎಂದು ಹೇಳಲಾಗಿದೆ.