ಕೋಮುವಾದ ಹಾಗೂ ಭಯೋತ್ಪಾದನೆ ಬಿತ್ತುವ ಹುನ್ನಾರ ನಡೆಯುತ್ತಿದೆ: ಯಡಿಯೂರಪ್ಪ

Update: 2016-09-05 13:22 GMT

ಮುಲ್ಕಿ, ಸೆ.5: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಸೇರಿದಂತೆ ಹಿಂದೂ ದೇವರುಗಳ ಅವಹೇಳ ಮಾಡುವ ಮೂಲಕ ಕರಾವಳಿಯಲ್ಲಿ ಕೋಮುವಾದ ಹಾಗೂ ಭಯೋತ್ಪಾದನೆ ಬಿತ್ತುವ ಹುನ್ನಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಇಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕರಾವಳಿಯಾದ್ಯಂತ ಹಿಂದೂ ಮುಖಂಡರ ಕೊಲೆ ನಡೆಯುತ್ತಿವೆ. ದೇವರುಗಳ ಅವಹೇಳ ಮಾಡಲಾಗುತ್ತಿದೆ. ಸರಕಾರ ಕ್ರಮ ಕೈಗೊಳ್ಳದೆ ಸುಮ್ಮನಿದೆ ಎಂದು ಯಡಿಯೂರಪ್ಪ ಕಿಡಿ ಕಾರಿದರು.

  ಸಾಮಾಜಿಕ ಜಾಲತಾಣದಲ್ಲಿ ಕಟೀಲು ದೇವಿಯ ಅವಹೇಳನ ಮಾಡಿದ ವ್ಯಕ್ತಿ ದೂರದ ವಿದೇಶದಲ್ಲಿದ್ದು, ವ್ಯಕ್ತಿಯನ್ನು ಬಂಧಿಸುವ ಬಗ್ಗೆ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಅವರು, ಸರಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, ಕೇಂದ್ರ ಗೃಹಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

   ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕರಾವಳಿಯಲ್ಲಿ ಹರಾಜಕತೆ ಇದೆ ಎನ್ನುವ ಹೇಳಿಕೆ ನೀಡಿರುವುದು ರಾಜ್ಯ ಸರಕಾರದ ನೈಜ ರಾಜನೀತಿಯನ್ನು ಹೇಳುತ್ತಿದೆ ಎಂದು ಕುಟುಕಿದ ಬಿಎಸ್‌ವೈ, ಕರಾವಳಿಯಲ್ಲಿ ಭಯೋತ್ಪಾದನೆ ಸೇರುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಐಎಸ್‌ಐಎಸ್‌ಗೆ ಕಾಸರಗೋಡು ಜಿಲ್ಲೆಯ ಒಂದು ಗ್ರಾಮ ಸುಮಾರು 16 ಮಂದಿ ಸೇರಿ ಒಟ್ಟು 21 ಮಂದಿ ಸೇರಿರುವ ಬಗ್ಗೆ ಮಾಹಿತಿ ಇದೆ. ಅದರಲ್ಲಿ ಒಬ್ಬ ಮಹಿಳೆಯೂ ಕೂಡಿರುವುದು ಅಪಾಯಕಾರಿ ಬೆಳವಣಿಗೆ ಎಂದರು.

 ಕಾವೇರಿ ತೀರ್ಪಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಕಾವೇರಿ ತೀರ್ಪು ಸಂಪೂರ್ಣ ಏಕಪಕ್ಷೀಯವಾಗಿದೆ. ರಾಜ್ಯದಲ್ಲಿ ಬರಗಾಲವಿದೆ, ಕುಡಿಯಲು ನೀರಿಲ್ಲ. ಹೀಗಿರುವಾಗ ಸುರ್ಪಿಂ ಹನ್ನೊಂದು ದಿನಗಳ ಕಾಲ 15 ಸಾವಿರ ಕ್ಯೂಸೆಕ್ಸ್ ನೀರು ನೀಡಲು ಸೂಚಿಸಿರುವುದು ತಪ್ಪು. ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳು ನಾಡಿಗೆ  ನೀರು ನೀಡಲು ಆದೇಶಿಸಿರುವ ಸುರ್ಪಿಂನ ಕ್ರಮವನ್ನು ಪ್ರಶ್ನಿಸಿ ಮರು ಅರ್ಜಿ ಹಾಕಲಾಗುವುದು. ಅದಕ್ಕೂ ಮೊದಲು ರಾಜ್ಯ ಸರಕಾರ ತುರ್ತು ವಿಧಾನ ಮಂಡಲ ಅಧಿವೇಶನ ಕೆರೆದು ಸಭೆ ನಡೆಸಿ ಸೂಕ್ತ ಮಾಹಿತಿಗಳನ್ನು ಕೇಂದ್ರಕ್ಕೆ ನೀಡಲಾಗುವುದು ಎಂದರು.

ಈ ಸಂದರ್ಭ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ರಘುಪತಿಭಟ್, ಮೋನಪ್ಪ ಭಂಡಾರಿ ಸಂಜೀವ ಮಟಂದೂರು, ಮಟ್ಟಾರು ರತ್ನಾಕರ ಹೆಗ್ಡೆ, ಬಿ. ನಾಗರಾಜ ಶೆಟ್ಟಿ, ಕರಾವಳಿ ಕಾಲೇಜಿನ ಗಣೀಶ್ ರಾವ್, ಗೀತಾಂಜಲಿ ಸುವರ್ಣ ಉಮಾನಾಥ ಕೋಟ್ಯಾನ್, ಕಟೀಲು ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News