ರಾಷ್ಟ್ರೀಯ ಹೆದ್ದಾರಿಗಳಿಗೆ ಪೊಲೀಸರ ಸುರಕ್ಷತಾ ಕ್ರಮ

Update: 2016-09-05 11:50 GMT

ವಿಟ್ಲ,ಸೆ. 5: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರು ರಸ್ತೆ ಸುರಕ್ಷತಾ ಕ್ರಮವಾಗಿ ಅಳವಡಿಸಿರುವ ಬ್ಯಾರಿಕೇಡ್‌ಗಳು ವಾಹನ ಸವಾರರ ಪಾಲಿಗೆ ತಾಳ್ಮೆ ಪರೀಕ್ಷಿಸುವಂತಿದೆ. ರಸ್ತೆ ಸುರಕ್ಷತೆ ಹಾಗೂ ಅಪಘಾತ, ಅಪರಾಧ ನಿಯಂತ್ರಣದ ಉದ್ದೇಶದಿಂದ ಹೆದ್ದಾರಿಯುದ್ದಕ್ಕೂ ಪೊಲೀಸ್ ಇಲಾಖೆ ವತಿಯಿಂದ ಈ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆಯಾದರೂ ವಾಹನ ಸವಾರರ ಪಾಲಿಗೆ ಮಾತ್ರ ಇದು ಅಪಾಯದ ಕರೆಗಂಟೆಯನ್ನೇ ಭಾರಿಸುತ್ತಿದೆ. ಹೆದ್ದಾರಿಯ ವಿವಿಧೆಡೆ ನಾಯಿಕೊಡೆಗಳಂತೆ ಇಂದು ಇಂತಹ ಬ್ಯಾರಿಕೇಡ್‌ಗಳು ವಿಪರೀತವಾಗಿ ಕಂಡುಬರುತ್ತಿದ್ದು, ಅಪಘಾತ, ಅಪರಾಧಗಳನ್ನು ತಡೆಗಟ್ಟುವ ಬದಲು ಇನ್ನಷ್ಟು ಸಮಸ್ಯೆಗಳಿಗೆ ಇದು ಹೇತುವಾಗುತ್ತಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಯ ಅಗತ್ಯವಿರುವ ಅಪಘಾತ ವಲಯಗಳಲ್ಲಿ ಇಂತಹ ಯಾವುದೇ ಬ್ಯಾರಿಕೇಡ್‌ಗಳು ಕಂಡು ಬರುತ್ತಿಲ್ಲ. ಬದಲಾಗಿ ಅನಾವಶ್ಯಕ ಸ್ಥಳಗಳಲ್ಲೇ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವೊಂದು ಶಾಲಾ-ಕಾಲೇಜುಗಳ ಮುಂಭಾಗ ಹೆದ್ದಾರಿಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ ಎಂಬ ಕಾರಣವನ್ನು ಪೊಲೀಸರು ನೀಡುತ್ತಿದ್ದಾರಾದರೂ ಶಾಲಾ-ಕಾಲೇಜು ಸಮಯ ಕಳೆದ ನಂತರವೂ ಅದನ್ನು ಅಲ್ಲಿಂದ ತೆರವುಗೊಳಿಸದೆ ರಾತ್ರಿ ಸಮಯದಲ್ಲೂ ಅದು ಅಲ್ಲೇ ಬೀಡುಬಿಟ್ಟಿರುತ್ತದೆ. ಇದು ವಾಹನ ಸವಾರರ ಪಾಲಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಅಲ್ಲದೆ ಹೆದ್ದಾರಿಯ ಬ್ಯಾರಿಕೇಡ್‌ಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ಹಾಗೂ ಕಂಪೆನಿಗಳ ಜಾಹೀರಾತುಗಳು ರಾರಾಜಿಸುತ್ತಿರುವುದರಿಂದಲೂ ಹೆಚ್ಚಾಗಿ ಅಪಾಯಕ್ಕೆ ಕಾರಣವಾಗುತ್ತಿದೆ. ವಾಹನ ಸವಾರರು ಈ ಬ್ಯಾರಿಕೇಡ್‌ಗಳ ಜಾಹೀರಾತುಗಳನ್ನು ವೀಕ್ಷಿಸುತ್ತಾ ಸಾಗುವುದರಿಂದ ಚಾಲನಾ ಗಮನ ಹಳಿ ತಪ್ಪುವುದರಿಂದ ಸಹಜವಾಗಿ ಅಪಘಾತಗಳಿಗೆ ಹೇತುವಾಗುತ್ತಿದೆ. ಬ್ಯಾರಿಕೇಡ್‌ಗಳು ವಿವಿಧ ಸಂಘ-ಸಂಸ್ಥೆಗಳು ಅಥವಾ ಕಂಪೆನಿಗಳು ತಮ್ಮ ಜಾಹೀರಾತು ಅಳವಡಿಸಿ ನೀಡುತ್ತಿರುವುದರಿಂದ ಸಹಜವಾಗಿಯೇ ಜಾಹೀರಾತು ಪ್ರಚಾರಪಡಿಸುವ ಉದ್ದೇಶದಿಂದಲೋ ಏನೋ ಜನಜಂಗುಳಿ ಪ್ರದೇಶಗಳು ಅಥವಾ ಪ್ರಮುಖ ಜಂಕ್ಷನ್‌ಗಳಲ್ಲೇ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಬ್ಯಾರಿಕೇಡ್‌ಗಳ ಅಳವಡಿಕೆಗೆ ಅಪರಾಧ ಚಟುವಟಿಕೆಗಳ ನಿಯಂತ್ರಣ ಎಂಬ ಕಾರಣವನ್ನು ಪೊಲೀಸ್ ಇಲಾಖೆ ನೀಡುತ್ತಿದೆಯಾದರೂ ಇದಕ್ಕೆ ಬದಲಾಗಿ ಪೊಲೀಸ್ ಪಹರೆ ಹೆಚ್ಚಿಸುವುದರಿಂದ ಇಂತಹ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಹೆದ್ದಾರಿ ಮಧ್ಯಭಾಗದಲ್ಲಿ ಒಂದೇ ಕಡೆ ಒಂದಕ್ಕಿಂತ ಹೆಚ್ಚು ಬ್ಯಾರಿಕೇಡ್‌ಗಳು ಇರುವುದರಿಂದ ಸಮಾನ ವೇಗದಲ್ಲಿ ಸಂಚರಿಸುತ್ತಿರುವ ವಾಹನ ಸವಾರರು ಇದನ್ನು ತಪ್ಪಿಸಲು ಬಹಳಷ್ಟು ಕಷ್ಟಪಡುತ್ತಿರುವುದೂ ಕಂಡುಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News