×
Ad

ಆರೋಪಿಗಳಾದ ನವನೀತ್ ಶೆಟ್ಟಿ, ನಿರಂಜನ್ ಭಟ್ ಮಂಗಳೂರು ಜೈಲಿಗೆ ವರ್ಗಾವಣೆ

Update: 2016-09-06 12:44 IST

ಉಡುಪಿ, ಸೆ.6: ಹಿರಿಯಡ್ಕ ಕಾರಾಗೃಹದಲ್ಲಿರುವ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿ ಇರಿಸುವ ನಿಟ್ಟಿನಲ್ಲಿ ಪ್ರಮುಖ ಆರೋಪಿಗಳಾದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್‌ನನ್ನು ಮಂಗಳೂರು ಕಾರಾಗೃಹಕ್ಕೆ ವರ್ಗಾಯಿಸಿ ಉಡುಪಿ ನ್ಯಾಯಾ ಲಯ ಆದೇಶ ನೀಡಿದೆ.

ಪ್ರಕರಣದ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಹಿರಿಯಡ್ಕ ಕಾರಾಗೃಹದಲ್ಲಿದ್ದ ನವನೀತ್, ನಿರಂಜನ್, ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್, ರಾಘವೇಂದ್ರ ಮತ್ತು ಮಂಗಳೂರು ಕಾರಾಗೃಹದಲ್ಲಿದ್ದ ರಾಜೇಶ್ವರಿ ಶೆಟ್ಟಿ ಅವರನ್ನು ಬೆಳಗ್ಗೆ 11ಗಂಟೆಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶ ರಾಜೇಶ್ ಕರ್ಣಂ ಮುಂದೆ ಹಾಜರುಪಡಿಸಲಾಯಿತು.

ಈಗಾಗಲೇ ಸಿಐಡಿ ತನಿಖೆಗೆ ಒಳಗಾಗಿರುವ ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರನನ್ನು ನವನೀತ್ ಹಾಗೂ ನಿರಂಜನ್ ಭಟ್ ಜೊತೆ ಒಂದೆ ಜೈಲಿನಲ್ಲಿ ಇರಿಸಬಾರದು. ತನಿಖೆಯ ಸಂದರ್ಭದ ವಿಚಾರಣೆಯನ್ನು ಇವರು ವಿನಿಮಯ ಮಾಡಿಕೊಳ್ಳುವುದರಿಂದ ಮುಂದೆ ತನಿಖೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಆದುದರಿಂದ ಈ ನಾಲ್ವರನ್ನು ಪ್ರತ್ಯೇಕ ಜೈಲಿನಲ್ಲಿ ಇಡಬೇಕು ಎಂದು ಸಹಾಯಕ ಸರಕಾರಿ ಅಭಿಯೋಜಕಿ ಮುಮ್ತಾಜ್ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಆರೋಪಿಗಳ ಪರ ನ್ಯಾಯವಾದಿ ಅರುಣ್ ಬಂಗೇರ ಬೆಳುವಾಯಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೆ ಆರೋಪಿಗಳನ್ನು ಏಕಾಂಗಿ ಯಾಗಿ ಸೆಲ್‌ಗಳಲ್ಲಿ ಇಡುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿವಾದ ಮಂಡಿಸಿದ ಎಪಿಪಿ ಮುಮ್ತಾಜ್ 'ಪ್ರತ್ಯೇಕವಾಗಿ ಅಂದರೆ ಏಕಾಂಗಿಯಾಗಿ ಇಡುವುದು ಅಲ್ಲ. ಆರೋಪಿಗಳು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳದಂತೆ ಇರಿಸಬೇಕೆಂಬುದು ನಮ್ಮ ಮನವಿಯಾಗಿದೆ' ಎಂದು ಆರೋಪಿಗಳ ಪರ ನ್ಯಾಯವಾದಿಗೆ ಮನದಟ್ಟು ಮಾಡಿದರು.

ವಾದ ನಡೆದ ಬಳಿಕ ಎಪಿಪಿಯ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಮಂಗಳೂರು ಜೈಲಿಗೆ ವರ್ಗಾವಣೆ ಮಾಡುವಂತೆ ಆದೇಶ ನೀಡಿದರು. ಈ ಸಂದರ್ಭದಲ್ಲಿ ಸಿಓಡಿ ತನಿಖಾಧಿಕಾರಿ ಚಂದ್ರಶೇಖರ್ ಯಾವುದೇ ಆರೋಪಿಗಳನ್ನು ವಶಕ್ಕೆ ಒಪ್ಪಿಸು ವಂತೆ ಮನವಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆ.19ರವರೆಗೆ ವಿಸ್ತರಿಸಿ ಆದೇಶ ನೀಡಿದರು.

ಬಳಿಕ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರನನ್ನು ಹಿರಿಯಡ್ಕ ಜೈಲು ಮತ್ತು ನವನೀತ್ ಶೆಟ್ಟಿ, ನಿರಂಜನ್ ಭಟ್ ಹಾಗೂ ರಾಜೇಶ್ವರಿ ಶೆಟ್ಟಿ ಅವರನ್ನು ಮಂಗಳೂರು ಜೈಲಿಗೆ ಕರೆದೊಯ್ಯಲಾಯಿತು. ಈ ಪ್ರಕರಣದಲ್ಲಿ ಶ್ರೀನಿವಾಸ ಭಟ್,ರಾಘವೇಂದ್ರ, ನಿರಂಜನ್ ಭಟ್ ಪರವಾಗಿ ವೈ.ವಿಕ್ರಮ ಹೆಗ್ಡೆ ಹಾಗೂ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಪರವಾಗಿ ಅರುಣ್ ಬಂಗೇರ ಬೆಳುವಾಯಿ ಮತ್ತು ಅರುಣ್ ಕುಮಾರ್ ಶೆಟ್ಟಿ ಬಂಟ್ವಾಳ ವಾದಿಸುತ್ತಿದ್ದಾರೆ.

ಮಂಗಳೂರು ಜೈಲಿನಲ್ಲಿದ್ದ ರಾಜೇಶ್ವರಿ ಶೆಟ್ಟಿಯನ್ನು ಇಂದು ಮಣಿಪಾಲ ಪೊಲೀಸರು ಖಾಸಗಿ ಬಸ್‌ನಲ್ಲಿಯೇ ಉಡುಪಿಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಮೊದಲು ಎರಡು ಬಾರಿ ಆಕೆ ಯನ್ನು ಪೊಲೀಸ್ ವಾಹನದಲ್ಲೇ ಕರೆದುಕೊಂಡು ಬರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News