ಸುರತ್ಕಲ್-ಎಂಆರ್‌ಪಿಎಲ್ ರಸ್ತೆ ದುರವಸ್ಥೆ ಖಂಡಿಸಿ ಡಿವೈಎಫ್‌ಐನಿಂದ ರಸ್ತೆ ತಡೆ

Update: 2016-09-06 08:13 GMT

ಮಂಗಳೂರು, ಸೆ.6: ಸುರತ್ಕಲ್‌ನಿಂದ ಎಂಆರ್‌ಪಿಎಲ್‌ವರೆಗಿನ ನಾಲ್ಕು ಕಿ.ಮೀ. ಉದ್ದದ ಸಾರ್ವಜನಿಕ ರಸ್ತೆ ಕೈಗಾರಿಕಾ ಘನ ವಾಹನಗಳ ಓಡಾಟದಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ರಸ್ತೆ ದುರವಸ್ಥೆಯನ್ನು ಖಂಡಿಸಿ, ಡಿವೈಎಫ್‌ಐ ಸುರತ್ಕಲ್ ಘಟಕದ ನೇತೃತ್ವದಲ್ಲಿ ಕಾನ ಜಂಕ್ಷನ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಈ ಭಾಗದಲ್ಲಿರುವ ಬೃಹತ್ ಉದ್ದಿಮೆಗಳ ಸಾವಿರಾರು ವಾಹನಗಳು ಈ ಸಾರ್ವಜನಿಕ ರಸ್ತೆಯನ್ನೆ ಸಂಪರ್ಕ ರಸ್ತೆಯಾಗಿ ಬಳಸುತ್ತಿವೆ. ವಿಪರೀತ ವಾಹನ ದಟ್ಟಣೆಯಿಂದಾಗಿ ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ರಸ್ತೆ ದುರಸ್ತಿಗಾಗಿ ಕಳೆದ ಎರಡು ವರ್ಷಗಳಿಂದ ಜನತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ನಗರ ಪಾಲಿಕೆ, ಸ್ಥಳೀಯ ಶಾಸಕರು ಮೌನವಹಿಸಿದ್ದಾರೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿವೈಎಫ್‌ಐ ಮುಖಂಡರಾದ ಮುನೀರ್ ಕಾಟಿಪಳ್ಳ, ಇಮ್ತಿಯಾಝ್, ಶ್ರೀನಾಥ್ ಕಾಟಿಪಳ್ಳ ಮಾತನಾಡಿದರು. ನವೀನ್ ಪೂಜಾರಿ, ಮೆಹಬೂಬ್ ಕಾನ, ರಹೀಮ್ ಕಾನ, ಫಾರೂಕ್ ಜನತಾ ಕಾಲನಿ, ಮುಹಮ್ಮದ್ ಅಲಿ ಬಾಳ, ಶ್ರೀನಿವಾಸ್ ಹೊಸಬೆಟ್ಟು, ಸಂತೋಷ್ ಕುಳಾಯಿ, ಬಿ.ಕೆ. ಮಕ್ಸೂದ್, ಅಜ್ಮಲ್ ಕಾನ ಮತ್ತಿತರರು ಭಾಗವಹಿಸಿದ್ದರು.

ಒಂದು ಗಂಟೆ ಕಾಲ ಬೃಹತ್ ವಾಹನಗಳ ಸಂಚಾರಕ್ಕೆ ತಡೆ ಒಡ್ಡಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಿಂದಾಗಿ ಘನ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News