ಕ್ರೈಸ್ತ ಧರ್ಮಗುರು, ಭಗಿನಿಯರಿಂದ ‘ಗಣಪ’ನಿಗೆ ಕಾಣಿಕೆ ಅರ್ಪಣೆ!

Update: 2016-09-06 08:34 GMT

ಮಂಗಳೂರು, ಸೆ.6: ನಗರದ ಸಂಘ ನಿಕೇತನದಲ್ಲಿ 69ನೆ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ವಿಘ್ನವಿನಾಶಕ ‘ಗಣೇಶ’ನಿಗೆ ಇಂದು ಬಿಕರ್ನಕಟ್ಟೆ ಇನ್‌ಫೆಂಟ್ ಜೀಸಸ್ ಬಾಲಯೇಸು ಮಂದಿರದ ಕ್ರೈಸ್ತ ಧರ್ಮಗುರುಗಳು ಹಾಗೂ ಕುಲಶೇಖರ ಸೇಕ್ರೆಡ್ ಹಾರ್ಟ್ ಕಾನ್ವೆಂಟ್‌ನ ಭಗಿನಿಯರು ಹಣ್ಣುಹಂಪಲು, ರೇಷ್ಮೆ ಸೀರೆ ಅರ್ಪಿಸಿದರು.

ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಸಂಘ ನಿಕೇತನಕ್ಕೆ ಆಗಮಿಸಿದ ಕ್ರೈಸ್ತ ಧರ್ಮಗುರುಗಳು ಹಾಗೂ ಭಗಿನಿಯರು ಸೇರಿದಂತೆ ಒಟ್ಟು 10 ಮಂದಿ ಕ್ರೈಸ್ತ ಬಾಂಧವರ ತಂಡವು ಗಣೇಶನಿಗೆ ಬಾಳೆಹಣ್ಣು, ಹಣ್ಣು ಹಂಪಲು ಹಾಗೂ ಬನಾರಸ್ ರೇಷ್ಮೆ ಸೀರೆಯನ್ನು ಕಾಣಕೆಯಾಗಿ ಅರ್ಪಿಸಿದರು. ಪ್ರತಿಯಾಗಿ ಗಣೇಶೋತ್ಸವ ಸಮಿತಿ ಪರವಾಗಿ ಕ್ರೈಸ್ತ ಬಾಂಧವರಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಬಾಲ ಯೇಸು ಮಂದಿರದ ನಿರ್ದೇಶಕ ಫಾ. ಎಲಿಯಾಸ್ ಡಿಸೋಜಾ, ಉಪ ನಿರ್ದೇಶಕ ಫಾ. ಪ್ರಕಾಶ್ ಡಿಕುನ್ನಾ, ಕುಲಶೇಖರ ಸೇಕ್ರೆಡ್ ಹಾರ್ಟ್ ಸಾಂತಾಕ್ರೂಝ್ ಕಾನ್ವೆಂಟ್‌ನ ಸಿಸ್ಟರ್ ಫ್ಲೋರಿಟಾ, ಸಿಸ್ಟರ್ ಗ್ಲಾಡಿಸ್, ಸಿ. ಸಿಂಪ್ಲಾ ಹಾಗೂ ಸಿ. ಡಿಯೋನಿಸಾ ಜತೆ ಚರ್ಚ್‌ನ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಆರೆಸ್ಸೆಸ್‌ನ ಕ್ಷೇತ್ರಿಯ ಸಂಘ ಚಾಲಕ ವಿ. ನಾಗರಾಜ್ ನೇತೃತ್ವದಲ್ಲಿ ಕ್ರೈಸ್ತ ಧರ್ಮಗುರುಗಳು ಹಾಗೂ ಭಗಿನಿಯರನ್ನು ಸ್ವಾಗತಿಸಲಾಯಿತು. ದೇವರ ದರ್ಶನದ ಬಳಿಕ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಯಿತು. ಈ ಸಂದರ್ಭ ಆರೆಸ್ಸೆಸ್‌ನ ಸಹ ಪ್ರಾಂತ ಪ್ರಚಾರಕ ಗುರುಪ್ರಸಾದ್, ವಿಭಾಗ ಪ್ರಚಾರಕ ಚಂದ್ರಬಾಬು, ಮಂಗಳೂರು ನಗರ ಸರ ಸಂಘ ಚಾಲಕ ಸುನಿಲ್ ಆಚಾರ್ಯ, ಪ್ರಾಂತ ಸಂಪರ್ಕ ಪ್ರಮುಖ್ ಪ್ರಕಾಶ್ ಪಿ.ಎಸ್., ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪ್ರವೀಣ್ ಕುಮಾರ್, ಮಂಗಳೂರು ಮಹಾನಗರ ಪ್ರಚಾರಕ್ ಪ್ರಮುಖ್ ಗಣೇಶ್ ಪ್ರಸಾದ್, ಕೆಎಸ್‌ಎಸ್ ಸಮಿತಿ ಕಾರ್ಯದರ್ಶಿ ರಘುವೀರ್ ಕಾಮತ್ ಉಪಸ್ಥಿತರಿದ್ದರು.

ಮೂರು ದಿನಗಳ ಹಿಂದೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಿಂದೂ ಬಾಂಧವರಿಗೆ ನಮಗೆ ಆಹ್ವಾನ ನೀಡಲಾಗಿತ್ತು. ಸಾಮರಸ್ಯ ಹಾಗೂ ಸೌಹಾರ್ದತೆಯ ಸಂಕೇತವಾಗಿ ನಾವು ಭೇಟಿ ನೀಡಿದ್ದೇವೆ. ಒಬ್ಬರು ಇನ್ನೊಬ್ಬರನ್ನು ಗೌರವಿಸುವ ಮೂಲಕ ಸಮಾಜದಲ್ಲಿ ಸಹಬಾಳ್ವೆಗೆ ಪೂರಕವಾಗಲಿದೆ ಎಂದು ಬಾಲ ಯೇಸು ಮಂದಿರದ ಉಪ ನಿರ್ದೇಶಕ ಫಾ. ಪ್ರಕಾಶ್ ಡಿಕುನ್ನಾ ಅಭಿಪ್ರಾಯಿಸಿದರು.

ಸೌಹಾರ್ದತೆ ಹಾಗೂ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಬಿಕರ್ನಕಟ್ಟೆಯ ಇನ್‌ಫೆಂಟ್ ಜೀಜಸ್ ಚರ್ಚ್‌ನಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೀಗ ಗಣೇಶೋತ್ಸವಕ್ಕೆ ಆಹ್ವಾನ ನೀಡಿದ ಮೇರೆಗೆ ಬಾಲ ಯೇಸು ಮಂದಿರದ ಕ್ರೈಸ್ತಧರ್ಮಗುರುಗಳು ಹಾಗೂ ಭಗಿನಿಯರು ಆಗಮಿಸಿರುವುದು ಸಂಸದ ತಂದಿದೆ. ಉಭಯ ಧರ್ಮಗಳ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವಲ್ಲಿ ಇಂತಹ ಭೇಟಿ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಆರೆಸ್ಸೆಸ್‌ನ ಕ್ಷೇತ್ರಿಯ ಸಂಘ ಚಾಲಕ ವಿ. ನಾಗರಾಜ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News