ಜಲಸಂಪನ್ಮೂಲ ಸಚಿವರ ರಾಜೀನಾಮೆಗೆ ಜನಾರ್ದನ ಪೂಜಾರಿ ಆಗ್ರಹ

Update: 2016-09-06 09:00 GMT

ಮಂಗಳೂರು, ಸೆ.6: ಕಾವೇರಿ ವಿಷಯ ನಿಭಾಯಿಸುವಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ವಿಲವಾಗಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ರಾಜೀನಾಮೆ ನೀಡಬೇಕು ಎಂದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅವರು ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ಹೇಳಿದರು.

ಕಾವೇರಿ ಪ್ರಕರಣದಲ್ಲಿ ಅಫಿದವಿತ್ ಸಲ್ಲಿಸುವಾಗಲೇ ಅದರಲ್ಲೇನಿದೆ ಎಂದು ಸರಕಾರ ಪರಿಶೀಲನೆ ಮಾಡಬೇಕಿತ್ತು. ಒಂದೆಡೆ ಹನಿ ನೀರನ್ನೂ ಬಿಡುವುದಿಲ್ಲ ಎಂದು ಸಿಎಂ ಹೇಳಿಕೊಂಡು ಬರುತ್ತಿದ್ದರೆ, ಇನ್ನೊಂದೆಡೆ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್‌ಗಿಂತ ಕಡಿಮೆ ನೀರು ಕೊಡುತ್ತೇವೆ ಎಂದು ಅಫಿದವಿತ್‌ನಲ್ಲಿ ಹೇಳಿರುವುದು ವಿಪರ್ಯಾಸ. ಇದಕ್ಕೆ ಪೂರಕವಾಗಿ ಸುಪ್ರೀಂ ಕೋರ್ಟ್ ಸಹಜವಾಗಿ 15 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಹೇಳಿದೆ. ಈಗ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.

ಕಾವೇರಿ ಕುರಿತ ಮಾಧ್ಯಮದವರ ಪ್ರಶ್ನೆಗೆ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಎಚ್ಕೆ ಪಾಟೀಲ್ ನಿದ್ದೆಯಲ್ಲಿದ್ದಂತೆ ಉತ್ತರಿಸುತ್ತಿದ್ದರು. ಇವರಿಗೆ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದ ಪೂಜಾರಿ, ರಾಜ್ಯದ ಜನತೆಯ ಪ್ರತಿಭಟನೆಗೆ ನನ್ನ ಪೂರ್ಣ ಬೆಂಬಲವಿದೆ. ಆದರೆ, ಬಂದ್‌ಗೆ ಇಲ್ಲ ಎಂದು ನುಡಿದರು.

ಎಂ.ಬಿ.ಪಾಟೀಲ್ ಅವರ ತಂದೆ ಬಹಳ ಒಳ್ಳೆಯವರು. ಆದರೆ ಎಂ.ಬಿ.ಪಾಟೀಲ್ ಅವರನ್ನು ಯಾವ ಕಾರಣಕ್ಕೆ ಸಚಿವರನ್ನಾಗಿ ಮಾಡಿದ್ದಾರೆ ಎಂಬದುದು ಗೊತ್ತಿಲ್ಲ. ದುಡ್ಡೇ ದೊಡ್ಡಪ್ಪ ಎಂಬಂತಾಗಿದೆ. ಎಲ್ಲ ಯೋಜನೆಗಳಿಗೆ ಹೊರ ರಾಜ್ಯದ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗುತ್ತಿದೆ ಆಪಾದಿಸಿದರು. ಕಾಂಗ್ರೆಸ್ ಸರಕಾರ ಜನವಿರೋಧಿ ನೀತಿ ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಪೂಜಾರಿ ಉತ್ತರಿಸಿದರು.

ಬಿ.ಎಸ್.ಯಡಿಯೂರಪ್ಪ ಅವರ ಹಿನ್ನೆಲೆ ಸರಿ ಇಲ್ಲ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಎಲ್ಲಾದರೂ ಸಿಎಂ ಅಗುವ ಅವಕಾಶ ಇದ್ದರೆ ಈಶ್ವರಪ್ಪ ಅವರಿಗೆ ಮಾತ್ರ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೊ, ಕರುಣಾಕರ ಶೆಟ್ಟಿ, ಉಮೇಶ್ಚಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News