×
Ad

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚಕಮಕಿ

Update: 2016-09-06 18:01 IST

ಸುಳ್ಯ, ಸೆ.6: ಸುಳ್ಯ ನಗರ ಪಂಚಾಯತ್‌ನ ಸಾಮಾನ್ಯ ಸಭೆಯು ನಗರ ಪಂಚಾಯತ್‌ನ ಪೌರ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್, ಮುಖ್ಯಾಧಿಕಾರಿ ಚಂದ್ರಕುಮಾರ್ ವೇದಿಕೆಯಲ್ಲಿದ್ದರು.

ಸದಸ್ಯ ಕೆ.ಎಂ.ಮುಸ್ತಾಫ ಮಾತನಾಡಿ, ಸಭೆಯ ಪಾಲನಾ ವರದಿಯನ್ನು ನೀಡಬೇಕು. ಕಳಪೆ ಕಾಮಗಾರಿಗಳ ನಿಯಂತ್ರಣಕ್ಕೆ ಕಾವಲು ಪಡೆ ರಚನೆ ಮಾಡಬೇಕು. ಗುಣಮಟ್ಟ ಕಾಯ್ದುಕೊಳ್ಳಲು ನಿವೃತ್ತ ಇಂಜಿನಿಯರ್ ಅಥವಾ ಕೆವಿಜಿ ಇಂಜಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಿಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕು. ಶಾಸ್ತ್ರಿ ವೃತ್ತದ ಹಂಪ್‌ಗೆ ಬಣ್ಣ ಬಳಿಯಬೇಕು. ಬೀದಿದೀಪ, ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ ಮಾಡುವವರನ್ನು ಸಾಮಾನ್ಯ ಸಭೆಗೆ ಕರೆಯಬೇಕು. ಬೀದಿ ನಾಯಿ ಸಮಸ್ಯೆಯನ್ನು ಪರಿಹರಿಸಬೇಕು. ಮೀನಿನ ಲಾರಿ ಮೀನು ಮಾರುಕಟ್ಟೆ ಆವರಣದ ಒಳಗೆ ಹೋಗುವಂತೆ ಗೇಟ್‌ನ್ನು ದೊಡ್ಡದು ಮಾಡಬೇಕು ಮತ್ತಿತರ ಬೇಡಿಕೆ ಮುಂದಿಟ್ಟರು.

ಕಾಮಗಾರಿ ಗುಣಮಟ್ಟ ಉಸ್ತುವಾರಿ ನೋಡಿಕೊಳ್ಳಲು ಇಂಜಿನಿಯರಿಂಗ್ ಕಾಲೇಜ್‌ನವರಿಗೆ ನೀಡುವುದು, ಹಂಪ್ಸ್‌ಗೆ ಬಣ್ಣ ಬಳಿಯುವ ವ್ಯವಸ್ಥೆ ಮಾಡುವುದಾಗಿ ಪ್ರಕಾಶ್ ಹೆಗ್ಡೆ ಉತ್ತರಿಸಿದರು.

ಭಸ್ಮಡ್ಕ ರಸ್ತೆ ಅಭಿವೃದ್ಧಿಗೆ ಮೂರು ಲಕ್ಷ ಇಟ್ಟಿದ್ದು, ಅದರ ನಿರ್ಣಯವನ್ನು ಬದಲಾಯಿಸಲಾಗಿದೆ. ನಿರ್ಣಯ ಮಾಡಿದ್ದನ್ನು ತಿದ್ದುವುದು ಯಾರು ಎಂದು ಉಪಾಧ್ಯಕ್ಷೆ ಮೀನಾಕ್ಷಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷಭೇದ ಮರೆತು ಎಲ್ಲಾ ಸದಸ್ಯರೂ ಅವರಿಗೆ ಬೆಂಬಲವಾಗಿ ಮಾತನಾಡಿದರು. ಈ ಸಂದರ್ಭ ಅಧ್ಯಕ್ಷರು ಮತ್ತು ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ವರ್ಗ 1ರಲ್ಲಿ 3 ಲಕ್ಷ ಅನುದಾನವನ್ನು ಸ್ಮಡ್ಕ ರಸ್ತೆಗೆ ನೀಡುವುದೆಂದು ನಿರ್ಣಯಿಸಲಾಯಿತು.

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಖಾತಾ ವ್ಯವಸ್ಥೆ ಜಾರಿಗೆ ಬರಲಿದ್ದು, ನಿವೇಶನ, ಕಟ್ಟಡ ಹೊಂದಿದವರು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಬೇಕು ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದರು.

ನಗರ ಪಂಚಾಯತ್ ಸಭೆಯಲ್ಲಿ ಮಾತನಾಡಿದ ಅವರು, ಈವರೆಗೆ ಜಮೀನಿಗೆ ಸಂಬಂಧಿಸಿ ತಾಲೂಕು ಕಚೇರಿಯಿಂದ ಆರ್‌ಟಿಸಿ ದಾಖಲೆ ಇದ್ದರೆ, ಮುಂದಿನ ದಿನಗಳಲ್ಲಿ ಈ ತಂತ್ರಾಂಶ ಜಾರಿಯಾಗಲಿದ್ದು, ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆಗೊಂಡ ನಿವೇಶನಗಳನ್ನು ಖಾತಾ ಮಾಡಿಸಬೇಕಾಗುತ್ತದೆ. ಅವುಗಳಿಗೆ ತಾಲೂಕು ಕಚೇರಿಯಲ್ಲಿ ಆರ್‌ಟಿಸಿ ಸಿಗುವುದಿಲ್ಲ. ನಗರ ಪಂಚಾಯತ್‌ನಲ್ಲಿ ನೀಡುವ ಖಾತೆಯೇ ಎಲ್ಲದಕ್ಕೂ ದಾಖಲೆಯಾಗುತ್ತದೆ ಎಂದವರು ಹೇಳಿದರು.

ಕಾಮಗಾರಿಗಳ ಬಿಲ್ ನೀಡುವ ಮುನ್ನ ವಾರ್ಡ್ ಸದಸ್ಯರ ಒಪ್ಪಿಗೆ ಪಡೆಯಬೇಕು. ಸದಸ್ಯರ ಅನುಮತಿ ಪಡೆದೇ ಮನೆನಂಬ್ರ ನೀಡಬೇಕು ಎಂದು ಸದಸ್ಯ ಕೆ.ಎಸ್.ಉಮ್ಮರ್ ಆಗ್ರಹಿಸಿದರು. ಹಬ್ಬದ ಸಮಯದಲ್ಲಿ ತಾತ್ಕಾಲಿಕ ಹೂವಿನ ಅಂಗಡಿಯವರಿಗೆ ಹೂವಿನ ಮಾರುಕಟ್ಟೆಯವರು ಬೆದರಿಸುತ್ತಿದ್ದಾರೆ ಎಂದು ಸದಸ್ಯೆ ಪ್ರೇಮಾ ಟೀಚರ್ ದೂರಿದರು. ದೇವಸ್ಥಾನದ ಎದುರು ಪಾರ್ಕಿಂಗ್ ಮಾಡುವ ಬಸ್‌ನವರು ಅಲ್ಲಿ ತ್ಯಾಜ್ಯ ಎಸೆಯುತ್ತಿದ್ದಾರೆ. ರಸ್ತೆ ಬದಿ ತರಕಾರಿ ಮಾರಾಟ ಮಾಡುವವರು ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಗಿರೀಶ್ ಕಲ್ಲುಗದ್ದೆ ಆಗ್ರಹಿಸಿದರು.

ಸೆಪ್ಟಂಬರ್ 8ರಂದು ಎಂಎಸ್‌ಡಬ್ಲು ವಿದ್ಯಾರ್ಥಿಗಳಿಂದ ವಾರ್ಡ್ ಸಮೀಕ್ಷೆ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಾಶ್ ಹೆಗ್ಡೆ ಪ್ರಕಟಿಸಿದರು. ಘನತ್ಯಾಜ್ಯ ವಿಲೇವಾರಿ ವಾರ್ಷಿಕ ನಿರ್ವಹಣೆಗೆ ದುಗ್ಗಲಡ್ಕದ ನಂದಿನಿ ನಿರಂತರ ಉಳಿತಾಯ ಸಂಘದವರು ಬರೆದುಕೊಂಡ ಅರ್ಜಿ ಕುರಿತು ಚರ್ಚೆ ನಡೆದು, ಮುಂದಿನ ಸಭೆಗೆ ಮುಂದೂಡಲಾಯಿತು.

ಗಾಂಧಿನಗರದ ನಗರ ಪಂಚಾಯತ್ ವಾಣಿಜ್ಯ ಸಂಕಿರ್ಣದಲ್ಲಿರುವ ಕೆಎಫ್‌ಡಿಸಿ ಮೀನು ಮಾರಾಟ ಮಳಿಗೆಯನ್ನು ಮುಂದುವರಿಸಲು ಜಿಲ್ಲಾಧಿಕಾರಿ ಪತ್ರದ ಕುರಿತು ಚರ್ಚೆ ನಡೆಯಿತು. ಈಗ ವ್ಯವಸ್ಥಿತ ಮೀನು ಮಾರುಕಟ್ಟೆ ಇರುವುದರಿಂದ ಕೆಎಫ್‌ಡಿಸಿ ಮಳಿಗೆಯ ಅಗತ್ಯವಿಲ್ಲ. ಅಲ್ಲದೆ ಅವರು ನಗರ ಪಂಚಾಯತ್‌ಗೆ ತಿಂಗಳಿಗೆ 2 ಸಾವಿರ ಬಾಡಿಗೆ ನೀಡಿ ಒಳಬಾಡಿಗೆಗೆ ನೀಡುತ್ತಿದ್ದಾರೆ ಎಂದು ಗೋಕುಲ್‌ದಾಸ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News